ಬೆಂಗಳೂರು: ಇಡೀ ರಾಜ್ಯದಲ್ಲಿ ತೆರಿಗೆ ಸಂಗ್ರಹವೂ ಸೇರಿ ಎಲ್ಲ ರೀತಿಯ ಆದಾಯದಲ್ಲಿ ಬೆಂಗಳೂರಿನ ಪಾಲು ಶೇ 60 ರಷ್ಟು ಇದೆ. ಆದರೆ, ಹಣದ ಹಂಚಿಕೆಯಲ್ಲಿ ಬೆಂಗಳೂರು ನಗರಕ್ಕೆ ಅನ್ಯಾಯ ಆಗುತ್ತಿದೆ. ನಗರಕ್ಕೆ ಹೆಚ್ಚು ಹಣ ನೀಡಬೇಕು ಎಂದು ಬಿಜೆಪಿಯ ಮುನಿರತ್ನ ವಿಧಾನಸಭೆಯಲ್ಲಿ ಆಗ್ರಹಿಸಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೇರೆ ನಗರಗಳಿಗೆ, ಜಿಲ್ಲೆಗಳಿಗೆ ಹಣ ಕೊಡಬೇಡಿ ಎಂದು ಹೇಳುವುದಿಲ್ಲ. ಆದರೆ, ಇಲ್ಲಿನ ಶ್ರಮದ ಹಣ ಇಲ್ಲಿಗೇ ಹೆಚ್ಚು ಪ್ರಮಾಣದಲ್ಲಿ ಬಳಕೆಯಾಗಬೇಕು ಎಂದು ಪ್ರತಿಪಾದಿಸಿದರು.
ಬಜೆಟ್‌ನಲ್ಲಿ ನೀರಾವರಿಗೆ ₹16,735 ಕೋಟಿ ನೀಡಿದ್ದಾರೆ. ಆದರೆ, ಶೇ 60 ರಷ್ಟು ಆದಾಯ ನೀಡುವ ಈ ನಗರಕ್ಕೆ ಕೊಟ್ಟಿದ್ದು ಕೇವಲ ₹1,200 ಕೋಟಿ. ಆ ಹಣವನ್ನು ಬಿಬಿಎಂಪಿ ಅನುದಾನದಿಂದ ಬಳಸಿಕೊಳ್ಳಿ ಎಂದೂ ಸರ್ಕಾರ ಹೇಳಿದೆ. ವೈಟ್ ಟಾಪಿಂಗ್‌ಗೆ ನಮ್ಮ ಸರ್ಕಾರ ಇದ್ದಾಗ ನೀಡಿದ್ದ ₹800 ಕೋಟಿ ಅನುದಾನವನ್ನು ಸೇರಿಸಿಕೊಂಡು ತಾವೇ ಕೊಡುತ್ತಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಐಟಿ– ಬಿಟಿ ವಲಯದಿಂದ ಶೇ 34 ರಷ್ಟು ಆದಾಯ ಬರುತ್ತಿದೆ. ಆದರೆ, ಇಲ್ಲಿನ ಸಂಚಾರ ದಟ್ಟಣೆ, ಹದಗೆಟ್ಟ ರಸ್ತೆಗಳಿಂದಾಗಿ ಹಲವು ಕಂಪನಿಗಳು ಹೈದರಾಬಾದ್‌ಗೆ ವಲಸೆ ಹೋಗುತ್ತಿವೆ. ಸಂಚಾರ ದಟ್ಟಣೆ ನಿವಾರಿಸುವುದಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳದೇ, ಈಗ ಸುರಂಗ ರಸ್ತೆಯ ಪ್ರಸ್ತಾಪ ಮಾಡುತ್ತಿದ್ದಾರೆ. 2013 ರ ಬಳಿಕ ರಸ್ತೆ ಅಗಲೀಕರಣ ಕೆಲಸವೇ ನಡೆದಿಲ್ಲ ಎಂದು ಮುನಿರತ್ನ ಹೇಳಿದರು.
ಈಗ ನಗರದ ಜನಸಂಖ್ಯೆ 2 ಕೋಟಿ ತಲುಪಿದೆ. 2050 ರ ವೇಳೆಗೆ 3.50 ಕೋಟಿ ಆಗಬಹುದು. ಆಗ ಬೆಂಗಳೂರು ಹೇಗಿರುತ್ತದೆ ಎಂಬುದನ್ನು ಊಹಿಸಲೂ ಆಗುವುದಿಲ್ಲ. ಇದಕ್ಕೆ ಸರ್ಕಾರದ ಬಳಿ ಯಾವ ಯೋಜನೆ ಇದೆ? ಎಷ್ಟು ಹಣ ಬಳಸುತ್ತದೆ? ಬೆಂಗಳೂರು ಗ್ರಾಮಾಂತರ ಸಂಸದರು ನಮ್ಮ ತೆರಿಗೆ ಹಣ ಗುಜರಾತ್‌ಗೆ ಯಾಕೆ ಕೊಡಬೇಕು ಎಂದು ಕೇಳಿದ್ದಾರೆ. ಬೆಂಗಳೂರಿನ ಹಣ ಇಲ್ಲೇ ಬಳಸಬೇಕಲ್ಲವೆ ಎಂದು ಪ್ರಶ್ನಿಸಿದರು.
‘ಬೆಂಗಳೂರಿಗೆ ಶಾಸಕರಿಗೆ ಹೆಚ್ಚಿನ ಅನುದಾನ ನೀಡಿ. ಕಾಂಗ್ರೆಸ್‌ಗೆ ಹೆಚ್ಚು ಕೊಟ್ಟು ನಮಗೆ ಕಡಿಮೆ ಕೊಟ್ಟರೂ ಪರವಾಗಿಲ್ಲ, ಒಟ್ಟಿನಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಹಣ ಕೊಡಬೇಕು’ ಎಂದು ಹೇಳಿದ ಅವರು, ಹೆಚ್ಚು ಅನುದಾನ ಪಡೆದಿರುವ ಕಾಂಗ್ರೆಸ್ ಶಾಸಕರ ಪಟ್ಟಿಯನ್ನು ಓದಿ ಹೇಳಿದರು.
ಸುರಂಗ ರಸ್ತೆ ಸಾಧ್ಯವಿಲ್ಲ: ಸುರಂಗ ರಸ್ತೆ ಮಾಡುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಿದೆ. ಇದಕ್ಕೆ ಒಂದು ಪೈಸೆ ಹಣ ಇಟ್ಟಿಲ್ಲ. ಹೆಬ್ಬಾಳದಿಂದ ಚಾಲುಕ್ಯ ವೃತ್ತಕ್ಕೆ 7 ಕಿ.ಮೀ ಇದೆ. ಇವರು ₹1,500 ಕೋಟಿ ವೆಚ್ಚದಲ್ಲಿ 3 ಕಿ.ಮೀ ಸುರಂಗ ರಸ್ತೆ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.