ಬಿಬಿಎಂಪಿ
ಬೆಂಗಳೂರು: ನಗರದ ಬೃಹತ್ ಯೋಜನೆಗಳಿಗೆ ಭೂಸ್ವಾಧೀನದ ಸಂದರ್ಭದಲ್ಲಿ ನಗದು ಪರಿಹಾರ ನೀಡುವ ಬದಲು ‘ಅಭಿವೃದ್ಧಿ ಹಕ್ಕು ಪ್ರಮಾಣಪತ್ರಗಳನ್ನು (ಡಿಆರ್‌ಸಿ) ನೀಡಲು ಮುಂದಾಗಿದೆ.
ಮುಂಬಯಿ, ಪುಣೆ ಮತ್ತು ಹೈದರಾಬಾದ್‌ಗಳಲ್ಲಿ, ಅರ್ಜಿ ಸಲ್ಲಿಸುವುದರಿಂದ ಹಿಡಿದು ಡಿಜಿಟಲ್ ಪ್ರಮಾಣಪತ್ರ ಪಡೆಯುವ ಡಿಆರ್‌ಸಿಯ ಎಲ್ಲ ಪ್ರಕ್ರಿಯೆಗಳೂ ಆನ್‌ಲೈನ್‌ನಲ್ಲಿ ನಡೆಯುತ್ತವೆ. ಆದರೆ ಈ ಬಗ್ಗೆ ಬಿಬಿಎಂಪಿಯಲ್ಲಿ ಯಾವುದೇ ಸಿದ್ಧತೆಗಳು ನಡೆದಿಲ್ಲ. ಇದರಿಂದ ಪಾರದರ್ಶಕ ಪ್ರಕ್ರಿಯೆಯ ಕೊರತೆ ಎದುರಾಗಲಿದ್ದು, ದುರುಪಯೋಗವಾಗುವ ಸಂಭವವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಏಳು ವರ್ಷದ ನಂತರ ಬೆಂಗಳೂರಿನಲ್ಲಿ ಡಿಆರ್‌ಸಿ ಅಥವಾ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಯೋಜನೆ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದೆ. ಹಲವು ವರ್ಷಗಳ ಹಿಂದೆ ನೀಡಲಾಗಿದ್ದ ₹2 ಸಾವಿರ ಕೋಟಿ ಮೌಲ್ಯದ 1,179 ಡಿಆರ್‌ಸಿಗಳನ್ನು ಮರುಮೌಲ್ಯಮಾಪನ ಮಾಡುವ ಪ್ರಕ್ರಿಯೆಯನ್ನು ಪಾಲಿಕೆ ಆರಂಭಿಸಿದೆ. ಇನ್ನೊಂದೆಡೆ, ವರ್ತೂರು ರಸ್ತೆ, ಕೊತ್ತನೂರು ರಸ್ತೆ, ಎಸ್.ವಿ ರಸ್ತೆಗಳ ವಿಸ್ತರಣೆ ಯೋಜನೆಗಳನ್ನು ಆರಂಭಿಸಿದ್ದು, ಟಿಡಿಆರ್ ಯೋಜನೆಯಡಿ ಭೂಸ್ವಾಧೀನ ಮಾಡಿಕೊಳ್ಳಲು ನಿರ್ಧರಿಸಿದೆ.
ನಗರದಲ್ಲಿ ಡಿಸಿಆರ್‌ಗಳು ಅತಿಹೆಚ್ಚಾಗಲಿದ್ದು, ಡೆವಲಪರ್‌ಗಳು ಅನುಮತಿ ನೀಡಲಾಗಿರುವ ಫ್ಲೋರ್ ಏರಿಯಾ ಅನುಪಾತಕ್ಕಿಂತ (ಎಫ್‌ಎಆರ್) ಹೆಚ್ಚು ಅಂತಸ್ತುಗಳನ್ನು ಅತಿಹೆಚ್ಚು ಜನಸಂಖ್ಯೆಯಿರುವ ಪ್ರದೇಶಗಳಲ್ಲಿ ನಿರ್ಮಿಸಲಿದ್ದಾರೆ. ಡಿಆರ್‌ಸಿಗಳ ಲಭ್ಯತೆ ಬಗ್ಗೆ ಆನ್‌ಲೈನ್‌ನಲ್ಲಿ ಮಾಹಿತಿ ಲಭ್ಯವಾಗದ್ದರಿಂದ, ಭೂಮಿ ಕಳೆದುಕೊಳ್ಳುವವರಿಂದ ಬಿಲ್ಡರ್‌ಗಳು ನೇರವಾಗಿ ಡಿಆರ್‌ಸಿಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಭೂಮಿ ಕಳೆದುಕೊಂಡವರಿಗೆ ವಾಸ್ತವದ ಮೌಲ್ಯ ಲಭ್ಯವಾಗುವುದಿಲ್ಲ.
ಮುಂಬಯಿ, ಪುಣೆ ಮತ್ತು ಹೈದರಾಬಾದ್‌ಗಳ ವೆಬ್‌ಸೈಟ್‌ಗಳಲ್ಲಿ ಡಿಆರ್‌ಸಿಗಳ ಲಭ್ಯತೆ ಸೇರಿದಂತೆ ಎಲ್ಲ ಮಾಹಿತಿಗಳೂ ಲಭ್ಯವಿದೆ. ಹೈದರಾಬಾದ್‌ನಲ್ಲಿ, ಟಿಡಿಆರ್ ಬ್ಯಾಂಕ್, ವರ್ಗಾವಣೆಯ ಸಂಕ್ಷಿಪ್ತ ಮಾಹಿತಿಯ ಟಿಡಿಆರ್ ಲೆಡ್ಜರ್, ಡಿಆರ್‌ಸಿಗಳನ್ನು ನಾಗರಿಕರು ಎಲ್ಲಿಂದ ಖರೀದಿಸಬಹುದು ಎಂಬ ಮಾಹಿತಿ ಇದೆ. ಮುಂಬಯಿ ವೆಬ್‌ಸೈಟ್‌ನಲ್ಲಿ ಡಿಆರ್‌ಸಿ ವಿತರಣೆ, ಉಪಯೋಗ ಮತ್ತು ಲಭ್ಯತೆಯ ನೈಜ ಅವಧಿಯ ದತ್ತಾಂಶ ಲಭ್ಯವಿದೆ. ಪುಣೆ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಡಿಸಿಆರ್‌ಗಳು, ಅದರ ವರ್ಗ, ಹೊಂದಿರುವವ ಹೆಸರು, ಒಟ್ಟು ಪ್ರದೇಶ ಮತ್ತು ಸಂಪರ್ಕಿಸುವ ಮಾಹಿತಿಗಳಿವೆ. ಬಿಬಿಎಂಪಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇಂತಹ ಯಾವುದೇ ಮಾಹಿತಿಯನ್ನು ಹೊಂದಿಲ್ಲ.
‘ಭೂಮಿ ಕಳೆದುಕೊಳ್ಳುವವರು ಟಿಡಿಆರ್ ಪಡೆದುಕೊಳ್ಳಲು ಒಪ್ಪದಿರುವುದರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವು ರಸ್ತೆಗಳ ವಿಸ್ತರಣೆ ಯೋಜನೆಗಳು ಸ್ಥಗಿತಗೊಂಡಿವೆ. ಟಿಡಿಆರ್ ಅತ್ಯಂತ ಆಕರ್ಷಕ ಪರಿಹಾರವಾಗಿದೆ. ಆದರೆ ಬೆಂಗಳೂರಿನಲ್ಲಿ ಇದು ಅಸಂಘಟಿತವಾಗಿದ್ದು, ಒಂದೇ ಕೂಟದ ನಿಯಂತ್ರಣದಲ್ಲಿದೆ. ಟಿಡಿಆರ್‌ಗೆ ಇರುವ ಬೇಡಿಕೆಯ ಬಗ್ಗೆ ಭೂಮಿ ಕಳೆದುಕೊಳ್ಳುವವರಿಗೆ ಮಾಹಿತಿ ಇಲ್ಲದಿರುವುದರಿಂದ, ಅವರಿಗೆ ನೈಜ ಮೌಲ್ಯ ಸಿಗುತ್ತಿಲ್ಲ’ ಎಂದು ಮೂಲಗಳು ತಿಳಿಸಿವೆ.
‘ಡಿಜಿಟಲ್ ಟಿಡಿಆರ್ ಜೊತೆಗೆ ಇತರೆ ಸೌಲಭ್ಯಗಳ ಡಿಜಿಟಲೀಕರಣದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಶೀಘ್ರದಲ್ಲಿಯೇ ಹೊಸ ವ್ಯವಸ್ಥೆ ಜಾರಿಯಾಗಲಿದೆ’ ಎಂದು ಬಿಬಿಎಂಪಿಯ ಭೂ ಸ್ವಾಧೀನ ಮತ್ತು ಟಿಡಿಆರ್ ವಿಭಾಗದ ಉಪ ಆಯುಕ್ತ ಕರೀಗೌಡ ತಿಳಿಸಿದರು.
ಬಿಡಿಎ ಆಯುಕ್ತ ಎನ್. ಜಯರಾಂ ಅವರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.