ಕಡತ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವುದಕ್ಕಾಗಿ ನಡೆಯುತ್ತಿರುವ ಜಾತಿ ಜನಗಣತಿಯ ಸಮೀಕ್ಷೆಯಲ್ಲಿ ತಮ್ಮ ಸಮುದಾಯದ ಜನರು ಕೊರಚ, ಕೊರಚರ್ ಎಂದು ನೋಂದಾಯಿಸಿಕೊಳ್ಳಬೇಕು ಎಂದು ಅಖಿಲ ಕರ್ನಾಟಕ ಕೊರಚ ಮಹಾಸಭಾ ಮನವಿ ಮಾಡಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಆದರ್ಶ ಯಲ್ಲಪ್ಪ, ‘ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಕೊರಚ ಸಮುದಾಯದವರು ರಾಜ್ಯದಾದ್ಯಂತ ವಾಸಿಸುತ್ತಿದ್ದಾರೆ. ಅಧಿಕಾರಿಗಳು ದತ್ತಾಂಶ ಸಂಗ್ರಹಿಸಲು ಮನೆ–ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಜಾತಿ ಕಾಲಂನಲ್ಲಿ ಕೊರಚ, ಕೊರಚರ್ ಎಂದು ನಮೂದಿಸಬೇಕು’ ಎಂದು ಮನವಿ ಮಾಡಿದರು.
‘ಕೊರಚ ಸಮುದಾಯದಲ್ಲಿ ದಬ್ಬೆ ಕೊರಚ, ಹಗ್ಗ ಕೊರಚ, ಕುಂಚಿ ಕೊರಚ ಎಂಬ ಉಪ ಪಂಗಡಗಳಿದ್ದು, ಈ ಮೂರೂ ಉಪ ಪಂಗಡಗಳನ್ನು ಕೊರಚ ಎಂದು ಪರಿಗಣಿಸಬೇಕು. ಇದರಿಂದ ನಮ್ಮ ಸಮುದಾಯವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವುದನ್ನು ಪತ್ತೆ ಹಚ್ಚಲು ಸಹಾಯಕವಾಗಲಿದೆ’ ಎಂದರು.
‘ಪ್ರತಿ ಜಿಲ್ಲೆಯಲ್ಲೂ ಕೊರಚ ಸಮುದಾಯ ಭವನ, ವಸತಿ ನಿಲಯಗಳ ನಿರ್ಮಿಸಬೇಕು. ವಚನಕಾರ ನುಲಿಯ ಚಂದಯ್ಯ ಅವರ ಹೆಸರಿನಲ್ಲಿ ಶರಣ ನುಲಿಯ ಚಂದಯ್ಯ ಅಭಿವೃದ್ಧಿ ನಿಗಮ ಸ್ಥಾಪಿಸಿ, ಸಮುದಾಯದ ಏಳಿಗೆಗೆ ಸಹಕರಿಸಬೇಕು. ಕೊರಚ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆಸಬೇಕು’ ಎಂದು ಆಗ್ರಹಿಸಿದರು.
ಮಹಾಸಭಾದ ಖಜಾಂಚಿ ಗಂಗಪ್ಪ ಕೆ., ಮುಖಂಡರಾದ ವಿನಾಯಕ ಪೆನುಗೊಂಡ, ಧನಂಜಯ ಎನ್., ಪದಾಧಿಕಾರಿಗಳಾದ ಸಿದ್ದೇಶ್ ಮಾದಪುರ, ಮಾರುತಿ ಮಾಕಡವಾಲೆ, ಕುಂಸಿ ಶ್ರೀನಿವಾಸ್, ಪುರುಷೋತ್ತಮ ಯಲ್ಲಾಪುರ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.