ADVERTISEMENT

ಮೆಟ್ರೊ: ‘ಸ್ವಾಗತ್‌’ ಗೇಟ್‌ ಅಳವಡಿಕೆ

ಬೈಯಪ್ಪನಹಳ್ಳಿ: ಕಾಮನ್‌ ಮೊಬಿಲಿಟಿ ಕಾರ್ಡ್‌ ಬಳಕೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 6:18 IST
Last Updated 29 ಜನವರಿ 2020, 6:18 IST
ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ‘ಸ್ವಾಗತ್‌’ ಗೇಟ್‌ ಅಳವಡಿಸಿರುವುದು
ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ‘ಸ್ವಾಗತ್‌’ ಗೇಟ್‌ ಅಳವಡಿಸಿರುವುದು   

ಬೆಂಗಳೂರು: ‘ನಮ್ಮ ಮೆಟ್ರೊ’ದ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ‘ಸ್ವಾಗತ್‌’ ಹೆಸರಿನ ಏಕೀಕೃತ ದರ ಸಂಗ್ರಹ ದ್ವಾರಗಳನ್ನು ಅಳವಡಿಸಲಾಗಿದೆ. ಆ ಮೂಲಕ ಬಹುನಿರೀಕ್ಷಿತ ‘ಕಾಮನ್‌ ಮೊಬಿಲಿಟಿ ಕಾರ್ಡ್‌’ ಪರಿಚಯಿಸುವ ಕಾರ್ಯಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಸಿದ್ಧತೆ ಪ್ರಾರಂಭಿಸಿದೆ.

ಈಗಾಗಲೇ ಇರುವ ಸ್ವಯಂಚಾಲಿತ ಶುಲ್ಕ ಸಂಗ್ರಹ (ಎಎಫ್‌ಸಿ) ಗೇಟ್‌ನ ಪಕ್ಕದಲ್ಲೇ ಈ ‘ಸ್ವಾಗತ್‌’ ಗೇಟ್‌ಗಳನ್ನು ಅಳವಡಿಸಲಾಗಿದೆ. ಆದರೆ, ತಾಂತ್ರಿಕವಾಗಿ ಜೋಡಣೆ ಮಾಡಿ ಕಾರ್ಯಾಚರಣೆಗೊಳ್ಳಲು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಬರುವ ಹಣಕಾಸು ವರ್ಷದಿಂದ ಇದರ ಪ್ರಾಯೋಗಿಕ ಸೇವೆ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ನಿಗಮದ ಮೂಲಗಳು ತಿಳಿಸಿವೆ.

ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್) ಹಾಗೂ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್‌ ಕಂಪ್ಯೂಟಿಂಗ್‌ (ಸಿಡಿಎಸಿ) ಸಹಯೋಗದಲ್ಲಿ ಈ ಗೇಟ್‌ಗಳು ಸರಬರಾಜು ಆಗಿವೆ. ಈ ದ್ವಾರಗಳ
ಸೇವೆ ಆರಂಭಗೊಂಡ ನಂತರ ಪ್ರಯಾಣಿಕರು ದೇಶದ ಯಾವುದೇ ಮೆಟ್ರೊದಲ್ಲಿ ಬಳಸುವ ಕಾರ್ಡ್‌ಗಳನ್ನು ‘ನಮ್ಮ ಮೆಟ್ರೊ’ದಲ್ಲಿಯೂ ಬಳಸಬಹುದು. ಬಿಎಂಟಿಸಿಯೂ ಈ ಸೇವೆಯನ್ನು ಅಳವಡಿಸಿಕೊಂಡರೆ, ಅದಕ್ಕೂ ಈ ಕಾರ್ಡ್ ಬಳಸಬಹುದಾಗಿದೆ.

ADVERTISEMENT

ಕೆಲಸ ಹೇಗೆ?

ಮೆಟ್ರೊದಲ್ಲಿ ಈಗಿರುವ ಕಾಂಟ್ಯಾಕ್ಟ್‌ಲೆಸ್‌ ಸ್ಮಾರ್ಟ್‌ಕಾರ್ಡ್ ಕ್ಲೋಸ್‌ಲೂಪ್‌ ವ್ಯವಸ್ಥೆ ಹೊಂದಿದೆ. ಅಂದರೆ, ಈ ಕಾರ್ಡ್‌ ಅನ್ನು ಎಎಫ್‌ಸಿ ಗೇಟ್‌ನಲ್ಲಿ ಸ್ವೈಪ್‌ ಮಾಡಿದಾಗ, ಕಡಿತಗೊಳ್ಳುವ ಹಣ ನೇರವಾಗಿ ಬಿಎಂಆರ್‌ಸಿಎಲ್ ಖಾತೆಗೆ ಜಮಾ ಆಗುತ್ತದೆ. ಹಾಗಾಗಿ, ಅದನ್ನು ಬೇರೆ ಸಾರಿಗೆ ವ್ಯವಸ್ಥೆಯಲ್ಲಿ ಬಳಕೆ ಮಾಡಲು ಬರುವುದಿಲ್ಲ.

ಆದರೆ, ‘ಸ್ವಾಗತ್‌’ ಗೇಟ್‌ ಓಪನ್ ಲೂಪ್ ವ್ಯವಸ್ಥೆ ಹೊಂದಿದೆ. ಅದನ್ನು ಯಾವುದೇ ಸಾರಿಗೆ ವ್ಯವಸ್ಥೆಯಲ್ಲಿ ಬಳಕೆ ಮಾಡಿದರೂ, ಒಂದೇ ಖಾತೆಗೆ ಹಣ ಜಮಾ ಆಗುತ್ತದೆ. ಅಲ್ಲಿಂದ ಆಯಾ ಸಂಸ್ಥೆಗೆ ಹೋಗುತ್ತದೆ. ಈ ಸಂಬಂಧ ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ.

ಕಾಮನ್ ಮೊಬಿಲಿಟಿ ಕಾರ್ಡ್ ಅನ್ನು ಪ್ರಾಯೋಗಿಕವಾಗಿ ಪರಿಚಯಿಸುವ ಕೆಲಸ ನಡೆದಿದೆ. ಏಪ್ರಿಲ್‌ನಿಂದ ಪ್ರಯಾಣಿಕರಿಗೆ <br/>ಈ ಸೇವೆ ಲಭ್ಯವಾಗಲಿದೆ.
-ಅಜಯ್ ಸೇಠ್,ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.