ADVERTISEMENT

ಜೈಲಿನಲ್ಲೇ ಕಮೋಡ್‌ ಇದೆ...

ರುದ್ರೇಶ್ ಹತ್ಯೆ ಪ್ರಕರಣ: ಆರೋಪಿ ವಸೀಂ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 19:29 IST
Last Updated 7 ಫೆಬ್ರುವರಿ 2019, 19:29 IST

ಬೆಂಗಳೂರು: ಜೈಲು ವಾರ್ಡ್‌ನಲ್ಲಿ (ವಿಕ್ಟೋರಿಯಾ ಆಸ್ಪತ್ರೆ) ಮತ್ತು ಪರಪ್ಪನ ಅಗ್ರಹಾರ ಜೈಲಿನಲ್ಲಿ ಪಾಶ್ಚಿಮಾತ್ಯ ಶೈಲಿಯ ಕಮೋಡ್‌ಗಳಿವೆ. ಆರೋಪಿ ಪರ ವಕೀಲರು ಹೇಳುವಂತೆ ಜೈಲಿನಲ್ಲಿ ಕಮೋಡ್‌ ಇಲ್ಲ ಎಂಬ ಹೇಳಿಕೆಯನ್ನು ಒಪ್ಪಲಾಗದು. ಆದ್ದರಿಂದ ಕೈದಿ, ಜೈಲಿನ ವ್ಯವಸ್ಥೆಯಲ್ಲೇ ಮಂಡಿಚಿಪ್ಪಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿ...

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ಆರೋಪಿ ವಸೀಂ ಅಹಮದ್‌ ತಮ್ಮ ಎಡಗಾಲಿನ ಎಸಿಎಲ್‌ (ಆ್ಯಂಟೀರಿಯರ್ ಕ್ರೂಷಿಯೇಟ್‌ ಲಿಗಮೆಂಟ್‌) ಶಸ್ತ್ರಚಿಕಿತ್ಸೆಗಾಗಿ ತಾತ್ಕಾಲಿಕ ಜಾಮೀನು ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿರುವ ಹೈಕೋರ್ಟ್‌, ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಗುರುವಾರ ಈ ಕುರಿತ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಹಾಗೂ ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ವಿಕ್ಟೋರಿಯಾ ಆಸ್ಪತ್ರೆಯ ಕೀಲು ಮೂಳೆ ತಜ್ಞರು, ಪರಪ್ಪನ ಅಗ್ರಹಾರ ಜೈಲಿನ ಸೂಪರಿಂಟೆಂಡೆಂಟ್‌ ಹಾಗೂ ಮುಖ್ಯ ವೈದ್ಯಾಧಿಕಾರಿಗಳ ಅಭಿಪ್ರಾಯ ಆಲಿಸಿತು.

ADVERTISEMENT

ವಿಚಾರಣೆ ವೇಳೆ ಈ ಅಧಿಕಾರಿಗಳು, ‘ಆರೋಪಿ ದೂರಿರುವಂತೆ ಜೈಲಿನಲ್ಲಿ ಮತ್ತು ವಿಕ್ಟೋರಿಯಾ ಆಸ್ಪತ್ರೆಯಲ್ಲಿ
ಶಸ್ತ್ರಚಿಕಿತ್ಸೆಗೆ ಸೂಕ್ತ ಸೌಲಭ್ಯಗಳಿಲ್ಲ’ ಎಂಬ ತಕರಾರನ್ನು ಅಲ್ಲಗಳೆದರು.

ಇದಕ್ಕೆ ಆರೋಪಿ ಪರ ವಕೀಲ ತಾಹಿರ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದರಾದರೂ, ನ್ಯಾಯಪೀಠ ಅವರನ್ನು ತರಾಟೆಗೆ ತೆಗೆದುಕೊಂಡಿತು. ‘ಇದೊಂದು ಗಂಭೀರ ಪ್ರಕರಣವಾಗಿದ್ದು ಆರೋಪಿ ವಿಕ್ಟೋರಿಯಾ ಆಸ್ಪತ್ರೆಯಲ್ಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲಿ’ ಎಂದು ಜೈಲು ಪ್ರಾಧಿಕಾರಕ್ಕೆ ನಿರ್ದೇಶಿಸಿತು.

ಏನೀ ಮೇಲ್ಮನವಿ?: ‘ನಾನು 2009ರಲ್ಲಿ ಬಲಗಾಲಿನ ಎಸಿಎಲ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಈಗ ಎಡಗಾಲಿನ ಮೊಣಕಾಲಿಗೂ ಶಸ್ತ್ರಚಿಕಿತ್ಸೆ ಅಗತ್ಯವೆಂದು ವೈದ್ಯರು ಹೇಳಿದ್ದಾರೆ. ಅದಕ್ಕಾಗಿ 3 ತಿಂಗಳ ತಾತ್ಕಾಲಿಕ ಜಾಮೀನು ನೀಡಬೇಕು’ ಎಂದು ಕೋರಿ ವಸೀಂ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿದ್ದಲಿಂಗ ಪ್ರಭು ತಿರಸ್ಕರಿಸಿದ್ದರು. ಈ ಆದೇಶ ಪ್ರಶ್ನಿಸಿ ವಸೀಂ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಎನ್‌ಐಎ ಪರ ವಕೀಲ ಪಿ.ಪ್ರಸನ್ನಕುಮಾರ್ ವಾದ ಮಂಡಿಸಿದರು.

ಪ್ರಕರಣವೇನು?: ಶಿವಾಜಿ ನಗರದಲ್ಲಿರುವ ಕಾಮರಾಜ ರಸ್ತೆಯಲ್ಲಿನ ಶ್ರೀನಿವಾಸ ಮೆಡಿಕಲ್‌ ಸ್ಟೋರ್ ಎದುರು ತನ್ನ ಸ್ನೇಹಿತರ ಜತೆ ನಿಂತಿದ್ದ ರುದ್ರೇಶ್‌ ಅವರನ್ನು ಬೈಕ್‌ನಲ್ಲಿ ಬಂದ ಇಬ್ಬರು ಆಸಾಮಿಗಳು ಹತ್ಯೆ ಮಾಡಿದ್ದರು. ಈ ಘಟನೆ 2016ರ ಅಕ್ಟೋಬರ್ 16ರಂದು ಬೆಳಿಗ್ಗೆ 9 ಗಂಟೆ ಸುಮಾರು ನಡೆದಿತ್ತು.

ಈ ಪ್ರಕರಣದಲ್ಲಿ, ಅಸೀಮ್‌ ಶರೀಫ್, ಇರ್ಫಾನ್ ಪಾಷಾ, ವಸೀಂ ಅಹಮದ್, ಮಹಮ್ಮದ್‌ ಸಾದಿಕ್‌ ಅಲಿಯಾಸ್ ಮಜಹರ್ ಮತ್ತು ಮಹಮ್ಮದ್ ಮುಬೀಬುಲ್ಲಾ ಅಲಿಯಾಸ್ ಮೌಲಾ ಆರೋಪಿಗಳಾಗಿದ್ದಾರೆ. ಎನ್‌ಐಎ ವಿಶೇಷ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.