ADVERTISEMENT

ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಅರ್ಜಿ: ಆದೇಶ ಕಾಯ್ದಿರಿಸಿದ ನ್ಯಾಯಾಲಯ

‘ಬ್ಯಾರಕ್‌ನಿಂದ ಹೊರಗೆ ಬರಲೂ ಬಿಟ್ಟಿಲ್ಲ’

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 15:51 IST
Last Updated 3 ಸೆಪ್ಟೆಂಬರ್ 2025, 15:51 IST
ದರ್ಶನ್‌ 
ದರ್ಶನ್‌    

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ, ನಟ ದರ್ಶನ್‌ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ಹಾಗೂ ಅವರಿಗೆ ಹೆಚ್ಚುವರಿ ದಿಂಬು, ಬೆಡ್‌ಶೀಟ್‌ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ಸಿಸಿಎಚ್‌ 64ನೇ ನ್ಯಾಯಾಲಯವು ಆದೇಶವನ್ನು ಕಾಯ್ದಿರಿಸಿದೆ. ಸೆ.9ರಂದು ಆದೇಶ ಪ್ರಕಟಿಸುವುದಾಗಿ ಹೇಳಿದೆ.

ಬಳ್ಳಾರಿ ಜೈಲಿಗೆ ದರ್ಶನ್ ಅವರನ್ನು ಸ್ಥಳಾಂತರಿಸಲು ಅನುಮತಿ ನೀಡುವಂತೆ ಪ್ರಾಸಿಕ್ಯೂಷನ್‌ ಪರ ವಕೀಲರು ಮನವಿ ಸಲ್ಲಿಸಿದ್ದರು. ಬೆಡ್‌ಶೀಟ್ ಹಾಗೂ ದಿಂಬು ನೀಡುವಂತೆ ಕೋರಿ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.

‘ಜೈಲಿನ ಬ್ಯಾರಕ್‌ನಿಂದ ದರ್ಶನ್ ಅವರನ್ನು ಹೊರಕ್ಕೆ ಬರುವುದಕ್ಕೂ ಅವಕಾಶ ನೀಡುತ್ತಿಲ್ಲ. ಒಂದು ಕೊಠಡಿಯಲ್ಲಿ ಒಬ್ಬರೇ ಇರುವಂತೆ ಶಿಕ್ಷೆ ನೀಡಲಾಗುತ್ತಿದೆ. ಬೇರೆ ಕೈದಿಗಳಿಗೆ ಹಾಗೂ ಶಿಕ್ಷೆಯಾದವರಿಗೂ ಸೌಲಭ್ಯ ನೀಡಲಾಗುತ್ತಿದೆ. ಆದರೆ, ದರ್ಶನ್ ಅವರಿಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ’ ಎಂದು ಅವರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

ADVERTISEMENT

‘ದರ್ಶನ್‌ ಕುಟುಂಬದ ಸದಸ್ಯರನ್ನೂ ಭೇಟಿ ಮಾಡಿಲ್ಲ. ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದೆ ಎಂಬ ಕಾರಣಕ್ಕೆ ಯಾವುದೇ ಸೌಲಭ್ಯ ನೀಡುವಂತಿಲ್ಲ ಎಂಬುದಾಗಿ ಜೈಲಿನ ಸಿಬ್ಬಂದಿ ಹೇಳುತ್ತಿದ್ದಾರೆ. ದರ್ಶನ್‌ ಅವರನ್ನು ಬೇರೆ ಕಾರಾಗೃಹಕ್ಕೆ ಸ್ಥಳಾಂತರ ಮಾಡಬಾರದು. ಕನಿಷ್ಠ ಸೌಲಭ್ಯ ಕೊಡಬೇಕೆಂದು ಮನವಿ ಮಾಡುತ್ತೇನೆ’ ಎಂದು ವಕೀಲರು ವಾದ ಮಂಡಿಸಿದರು.

‘ಬಟ್ಟೆ, ಹಾಸಿಗೆ, ಚಪ್ಪಲಿ, ತಟ್ಟೆ, ಚಮಚ ಸೇರಿ ಅಗತ್ಯ ವಸ್ತುಗಳನ್ನು ಸ್ವಂತವಾಗಿ ಪಡೆಯಲು ಅವಕಾಶವಿದೆ. ವಿಚಾರಣಾಧೀನ ಕೈದಿ ಹಾಗೂ ಸಜಾ ಅಪರಾಧಿ ಸಹ ಕೆಲವು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಹೆಚ್ಚುವರಿ ಸೌಲಭ್ಯಗಳನ್ನು ಕೇಳುತ್ತಿಲ್ಲ. ಜೈಲಿನ ನಿಯಮಗಳಿಗೆ ಒಳಪಟ್ಟು ಸೌಲಭ್ಯ ಕಲ್ಪಿಸಿ’ ಎಂದು ಕೋರಿದರು.

‘ಈ ರೀತಿಯ ತಾರತಮ್ಯಕ್ಕೆ ಈಗಿನ ಕಾರಾಗೃಹ ಹಾಗೂ ಸುಧಾರಣಾ ಇಲಾಖೆಯ ಮುಖಸ್ಥ ಬಿ.ದಯಾನಂದ ಅವರೇ ಕಾರಣ’ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಮರಣ ದಂಡನೆ ನೀಡುವಂತೆ ಕೋರಿದ ವ್ಯಕ್ತಿ

ಅರ್ಜಿಗಳ ವಿಚಾರಣೆ ನಡೆಯುತ್ತಿದ್ದ ವೇಳೆ ನ್ಯಾಯಾಲಯದ ಹಾಲ್‌ಗೆ ನುಗ್ಗಿದ ವ್ಯಕ್ತಿಯೊಬ್ಬ ದರ್ಶನ್ ಪವಿತ್ರಾಗೌಡ ಸೇರಿ ಎಲ್ಲಾ ಆರೋಪಿಗಳಿಗೂ ಮರಣದಂಡನೆ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ. ವ್ಯಕ್ತಿಯ ವರ್ತನೆಯಿಂದ ಕೋರ್ಟ್ ಹಾಲ್‌ನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.  ಅರ್ಜಿ ಹಿಡಿದು ಬಂದ ವ್ಯಕ್ತಿಯನ್ನು ನ್ಯಾಯಾಧೀಶರು ಪ್ರಶ್ನಿಸಿದಾಗ ‘ನಾನು ರವಿಬೆಳಗೆರೆ ಕಡೆಯವನು’ ಎಂದು ಹೇಳಿದ್ದಾನೆ. ‘ಈ ರೀತಿಯ ಅರ್ಜಿ ಹಿಡಿದು ಬಂದರೆ ಪಡೆಯಲು ಅವಕಾಶ ಇಲ್ಲ. ಎಲ್ಲವೂ ಕಾನೂನು ಪ್ರಕಾರವೇ ನಡೆಯಬೇಕು. ಸರ್ಕಾರದ ಮೂಲಕವೇ ಅರ್ಜಿ ಸಲ್ಲಿಸಿ’ ಎಂದು ಸೂಚಿಸಿದರು. ಆಗ ನ್ಯಾಯಾಲಯದ ಸಿಬ್ಬಂದಿ ಆತನನ್ನು ಹೊರಕ್ಕೆ ಕಳುಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.