ADVERTISEMENT

ಮೊದಲ ಜನತಾ ದರ್ಶನ: 6,684 ಅಹವಾಲು ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2023, 15:56 IST
Last Updated 25 ಸೆಪ್ಟೆಂಬರ್ 2023, 15:56 IST
<div class="paragraphs"><p>ಹಾವೇರಿಯ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅಹವಾಲು ನೀಡಲು ಬಂದ ಜನ</p></div>

ಹಾವೇರಿಯ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅಹವಾಲು ನೀಡಲು ಬಂದ ಜನ

   

ಬೆಂಗಳೂರು: ರಾಜ್ಯದ 29 ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೋಮವಾರ ನಡೆಸಿದ ಜನತಾ ದರ್ಶನದಲ್ಲಿ ಒಟ್ಟು 6,684 ಅಹವಾಲುಗಳು ಸಲ್ಲಿಕೆಯಾಗಿವೆ. 21 ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗಿದೆ.

‘ಗದಗ ಮತ್ತು ಬೆಳಗಾವಿ ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲೂ ಜನತಾ ದರ್ಶನ ನಡೆಸಲಾಗಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಅತ್ಯಧಿಕ 2,100 ಅಹವಾಲುಗಳು ಬಂದಿವೆ. ನಂತರದ ಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ನಗರಾಭಿವೃದ್ಧಿ ಇಲಾಖೆಗಳಿವೆ. ಒಟ್ಟು 6,663 ಅಹವಾಲುಗಳನ್ನು ವಿಲೇವಾರಿಗಾಗಿ ವಿವಿಧ ಇಲಾಖೆಗಳಿಗೆ ರವಾನಿಸಲಾಗಿದೆ’ ಎಂದು ಮುಖ್ಯಮಂತ್ರಿಯವರ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಪ್ರತಿ ತಿಂಗಳ 25ರಂದು ಎಲ್ಲ ಜಿಲ್ಲೆಗಳಲ್ಲೂ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಜನತಾ ದರ್ಶನ ನಡೆಸಲಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದು ಜನರ ಅಹವಾಲು ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವ ಹೊಸ ಕಾರ್ಯಕ್ರಮ ಸೋಮವಾರದಿಂದ ಜಾರಿಗೆ ಬಂದಿದೆ.

774 ಅಹವಾಲುಗಳೊಂದಿಗೆ ಹಾವೇರಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಹಾಸನ (432) ಮತ್ತು ಕೋಲಾರ (423) ಜಿಲ್ಲೆಗಳಿವೆ. ಲಿಖಿತ ರೂಪದ ಅಹವಾಲುಗಳನ್ನು ಸ್ವೀಕರಿಸಿ, ದಾಖಲಿಸಿಕೊಳ್ಳಲಾಗಿದೆ. ಪರಿಹಾರಕ್ಕಾಗಿ ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಲಾಗಿದೆ. ಮೌಖಿಕ ಅಹವಾಲುಗಳನ್ನೂ ಆಲಿಸಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಯವರ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.