ADVERTISEMENT

ಸಿಂಧೂರಿ ವರ್ಗಾವಣೆಗೆ ಜನವಾದಿ ಮಹಿಳಾ ಸಂಘಟನೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 19:17 IST
Last Updated 25 ಸೆಪ್ಟೆಂಬರ್ 2019, 19:17 IST
ರೋಹಿಣಿ ಸಿಂಧೂರಿ
ರೋಹಿಣಿ ಸಿಂಧೂರಿ   

ಬೆಂಗಳೂರು:ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಲ್ಯಾಣ ಮಂಡಳಿಯ ಕಾರ್ಯದರ್ಶಿಯಾಗಿದ್ದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಯನ್ನು ಜನವಾದಿ ಮಹಿಳಾ ಸಂಘಟನೆ ಖಂಡಿಸಿದೆ.

‘ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯನ್ನು ಹಲವು ಕಾರ್ಮಿಕರ ಪರ ಯೋಜನೆಗಳನ್ನು ರೂಪಿಸುವ ಮೂಲಕ ಸಮರ್ಪಕವಾಗಿ ಬಳಸಲು ಸಿಂಧೂರಿ ಹೊರಟಿದ್ದರು.ಕೇಂದ್ರ ಸರ್ಕಾರದಿಂದರಾಜ್ಯಕ್ಕೆ ಸಿಗಬೇಕಾದನೆರೆ, ಬರ ಪರಿಹಾರದ ಹಣವನ್ನು ತರಲು ವಿಫಲವಾದ ರಾಜ್ಯ ಸರ್ಕಾರಬಡ ಕಾರ್ಮಿಕ ಮಕ್ಕಳ ಬದುಕಿಗೆ ಬರೆ ಹಾಕಲು ಹೊರಟಿದೆ. ಅದಕ್ಕೆ ಅಡ್ಡಿ ಎಂದು ರೋಹಿಣಿ ಸಿಂಧೂರಿಯವರನ್ನು ನಿವಾರಿಸಿಕೊಂಡ ರಾಜ್ಯ ಸರ್ಕಾರವನ್ನುನಾವು ಖಂಡಿಸುತ್ತೇವೆ’ ಎಂದು ಸಂಘಟನೆಯ ಅಧ್ಯಕ್ಷೆ ದೇವಿ ಮತ್ತು ಪ್ರಧಾನ ಕಾರ್ಯದರ್ಶಿ ಗೌರಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೋಹಿಣಿ ಸಿಂಧೂರಿ ಅವರ ವರ್ಗಾವಣೆಯನ್ನು ಕೈಬಿಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

ರೋಹಿಣಿಗೆ ಅದೇ ಹುದ್ದೆ ಕೊಡಿ: ಮಣಿವಣ್ಣನ್ ಪತ್ರ

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಹುದ್ದೆ ತೋರಿಸದೇ ವರ್ಗಾವಣೆ ಮಾಡಿದ ಬಗ್ಗೆ ಅಧಿಕಾರಿಗಳ ವಲಯದಲ್ಲಿ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಹಿರಿಯ ಐಎಎಸ್‌ ಅಧಿಕಾರಿ ಪಿ. ಮಣಿವಣ್ಣನ್‌ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು, ‘ಅವರಿಗೆ ಅದೇ ಹುದ್ದೆಯನ್ನೇ ಕೊಡಿ’ ಎಂದು ಪ್ರತಿಪಾದಿಸಿದ್ದಾರೆ.

‘ರೋಹಿಣಿಯವರನ್ನು ಕಟ್ಟಡ ಹಾಗೂ ನಿರ್ಮಾಣ ಕೆಲಸಗಾರರ ಕಲ್ಯಾಣ ಮಂಡಳಿಯಲ್ಲೇ ಮುಂದುವರಿಯಲು ಅವಕಾಶ ನೀಡಬೇಕು. ಇದರಿಂದ, ಮಂಡಳಿಯಲ್ಲಿ ಇನ್ನಷ್ಟು ಹೊಸತನ ತರುವುದರ ಜೊತೆಗೆ ಅದರ ಏಳಿಗೆಗೆ ಶ್ರಮಿಸಬಲ್ಲರು’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘ವರ್ಗಾವಣೆ ವಿಷಯವಾಗಿ ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಸರ್ಕಾರದ ಬಗ್ಗೆ ಸದಭಿಪ್ರಾಯ ಮೂಡಿಸುವುದಿಲ್ಲ. ಯಾವುದೇ ಅಧಿಕಾರಿಯ ವರ್ಗಾವಣೆ ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ’ ಎಂದು ಅವರು ಹೇಳಿದ್ದಾರೆ.

‘ಮಾಧ್ಯಮದ ವರದಿಗಳಲ್ಲಿ ನನ್ನದೂ ಸೇರಿ ಕೆಲವು ಹಿರಿಯ ಐಎಎಸ್‌ ಅಧಿಕಾರಿಗಳ ಉಲ್ಲೇಖವಿದೆ. ಕಾರ್ಮಿಕರು ಮತ್ತು ಅವರ ಮಕ್ಕಳ ಕಲ್ಯಾಣಕ್ಕಾಗಿ ತಂತ್ರಜ್ಞಾನ ಆಧಾರಿತ ಸೇವೆಯನ್ನು ಟೆಂಡರ್‌ ಕರೆಯದೇ ಕಿಯೋನಿಕ್ಸ್‌ಗೆ ನೀಡಬೇಕು ಎಂದು ಪ್ರಭಾವ ಬೀರಿರುವುದಾಗಿ ಪ್ರಕಟವಾಗಿದೆ. ವಾಸ್ತವವೇ ಬೇರೆ, ಈ ಸಹಾಯವಾಣಿ ಇಡೀ ಕಾರ್ಮಿಕ ಇಲಾಖೆಗೆ ಸೇರಿದ್ದಾಗಿದೆ. ಆಗಸ್ಟ್‌ 7 ರಂದು ಆಗಿರುವ ಸರ್ಕಾರಿ ಆದೇಶದ ಪ್ರಕಾರ, ಟೆಂಡರ್‌ ಕರೆದೇ ನೀಡಬೇಕು. ಹಾಗೆಯೇ ನಡೆದಿದೆ ’ ಎಂದು ಅವರು ತಿಳಿಸಿದ್ದಾರೆ.

ಅಧಿಕಾರಿಗಳ ಆಕ್ರೋಶ: ರೋಹಿಣಿ ಅವರನ್ನು ಹುದ್ದೆ ತೋರಿಸದೇ ವರ್ಗಾವಣೆ ಮಾಡಿದ ಬಗ್ಗೆ ಹಾಗೂ ಕಲ್ಯಾಣ ನಿಧಿ ಹಣವನ್ನು ನೆರೆ ಪರಿಹಾರಕ್ಕೆ ವರ್ಗಾವಣೆ ಮಾಡಲು ಒತ್ತಡ ಹೇರಿದ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ, ಅಧಿಕಾರಿಗಳ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಅನೇಕ ಹಿರಿಯ ಐಎಎಸ್ ಅಧಿಕಾರಿಗಳು ರೋಹಿಣಿ ಬೆಂಬಲಕ್ಕೆ ನಿಂತಿದ್ದರು. ಇದು ಐಎಎಸ್‌ ಅಧಿಕಾರಿಗಳ ಮಧ್ಯೆ ಚರ್ಚೆಗೂ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆ ನಡೆದಿತ್ತು. ಈ ಬೆಳವಣಿಗೆ ಬೆನ್ನಲ್ಲೇ, ರೋಹಿಣಿ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸುವಂತೆ ಮಣಿವಣ್ಣನ್‌ ಪತ್ರ ಬರೆದಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.