ADVERTISEMENT

ಹಂಗಿನಲ್ಲಿದ್ದೆ, ಕಾರ್ಯಕರ್ತರ ಕಡೆಗಣಿಸಿದೆ: ಎಚ್‌.ಡಿ.ಕುಮಾರಸ್ವಾಮಿ ಬೇಸರ

ಪಕ್ಷ ಕಟ್ಟಿದ 12 ವರ್ಷದ ಸ್ನೇಹಿತರು ದೂರ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 18:56 IST
Last Updated 7 ಆಗಸ್ಟ್ 2019, 18:56 IST
ಬೆಂಗಳೂರಿನಲ್ಲಿ ಬುಧವಾರ ನಡೆದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಕಾರ್ಯಕರ್ತರಿಗೆ ಕೆಲವು ಸೂಚನೆ ನೀಡಿದರು. ಪಕ್ಷದ ಮುಖಂಡರಾದ ಬಂಡೆಪ್ಪ ಕಾಶೆಂಪುರ, ಎಚ್‌.ಡಿ.ಕುಮಾರಸ್ವಾಮಿ, ಜಾಫರುಲ್ಲಾ ಖಾನ್‌, ಎಚ್‌.ಕೆ.ಕುಮಾರಸ್ವಾಮಿ ಇದ್ದರು.  ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಬುಧವಾರ ನಡೆದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಕಾರ್ಯಕರ್ತರಿಗೆ ಕೆಲವು ಸೂಚನೆ ನೀಡಿದರು. ಪಕ್ಷದ ಮುಖಂಡರಾದ ಬಂಡೆಪ್ಪ ಕಾಶೆಂಪುರ, ಎಚ್‌.ಡಿ.ಕುಮಾರಸ್ವಾಮಿ, ಜಾಫರುಲ್ಲಾ ಖಾನ್‌, ಎಚ್‌.ಕೆ.ಕುಮಾರಸ್ವಾಮಿ ಇದ್ದರು.  ಪ್ರಜಾವಾಣಿ ಚಿತ್ರ   

ಬೆಂಗಳೂರು: ‘14 ತಿಂಗಳು ಮುಲಾಜಿನಲ್ಲೇಮುಖ್ಯಮಂತ್ರಿ ಸ್ಥಾನದಲ್ಲಿದ್ದ ನನಗೆ ಪಕ್ಷದ ಕಾರ್ಯಕರ್ತರ ಯಾವ ಕೆಲಸವನ್ನೂ ಮಾಡಿಕೊಡುವುದು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿ ಸ್ಥಾನ ಹೋಗಿ ಇದೀಗ ಮತ್ತೆ ಕಾರ್ಯಕರ್ತರೊಂದಿಗೆ ಬೆರೆಯುವ ಅವಕಾಶ ದೊರೆತ ಬಳಿಕ ಮನಸ್ಸು ನಿರಾಳವಾಗಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ಬುಧವಾರ ಪಕ್ಷದ ನಿಷ್ಠಾವಂತಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಾವು ಕಳೆದ ವಿಧಾನಸಭಾ ಚುನಾವಣೆಯಲ್ಲಿಕಾಂಗ್ರೆಸ್‌ ವಿರುದ್ಧ ಹೋರಾಡಿದವರು. ಬಳಿಕ ಪರಿಸ್ಥಿತಿ ಬದಲಾಗಿ ಅವರೊಂದಿಗೆಯೇ ಸೇರಿಕೊಂಡು ಅಧಿಕಾರ ನಡೆಸುವಂತಾಯಿತು. ನಾನು ಆಗ ಕಣ್ಣೀರು ಹಾಕಿದೆ. ಇದೀಗ ಮುಖ್ಯಮಂತ್ರಿ ಸ್ಥಾನ ಹೋದಾಗ ನಾನು ಕಣ್ಣೀರು ಹಾಕಿಲ್ಲ, ನನ್ಮ ಮನಸ್ಸು ನಿರಾಳವಾಗಿದೆ’ ಎಂದರು.

‘ಸಾ.ರಾ.ಮಹೇಶ್‌ ನನ್ನೊಂದಿಗೆ ಓಡಾಡುತ್ತಿರುತ್ತಾನೆ. ಅದೇ ಕಾರಣಕ್ಕೆ ಆತನನ್ನು ವಿಲಿನ್‌ ರೀತಿ ಮಾಡಿಬಿಟ್ಟಿದ್ದಾರೆ. ನನ್ನ 12 ವರ್ಷದ ರಾಜಕೀಯ ಜೀವನದಲ್ಲಿ ನಾನು ಕಾರ್ಯಕರ್ತರಿಗೆಹಣ ಕೊಟ್ಟಿಲ್ಲ, ಪಕ್ಷ ಇದೀಗ ಸಂಕಷ್ಟದಲ್ಲಿದ್ದು, ಲಕ್ಷಾಂತರ ಕಾರ್ಯಕರ್ತರು ಸಣ್ಣಪುಟ್ಟ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಬೇಕು’ ಎಂದರು.

ADVERTISEMENT

ಮಾಡಿದ್ದು ನಾನು:‘ಪ್ರವಾಹ ಪರಿಸ್ಥಿತಿ ನಿಭಾಯಿಸಲು ಪ್ರತಿ ಜಿಲ್ಲೆಯಲ್ಲಿ ₹20 ಕೋಟಿ ಹಣ ತೆಗೆದಿರಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ, ಈ ಹಣವನ್ನು ಬಜೆಟ್‌ನಲ್ಲಿ ತೆಗೆದಿರಿಸಿದ್ದು ನಾನು. ಇದೇ ಹಣವಲ್ಲಿ ಇದೀಗ ಮುಖ್ಯಮಂತ್ರಿ ಮೀನುಗಾರರ ಸಾಲ ಮನ್ನಾ, ನೇಕಾರರ ಸಾಲ ಮನ್ನಾ ಎಂದು ಹೇಳುತ್ತಿದ್ದಾರೆ’ ಎಂದರು.

ವರದಾನ:ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಮಾತನಾಡಿ, ‘ತುಮಕೂರಿನಲ್ಲಿ ನನಗಾದ ಸೋಲು ನನಗೆ ವರದಾನ ಎಂದು ಭಾವಿಸಿದ್ದೇನೆ. ನನ್ನನ್ನು ಸೋಲಿಸಿದ ಪುಣ್ಯಾತ್ಮರಿಗೆ ಒಳ್ಳೆಯದಾಗಲಿ, ಆ ಸೋಲು ಪಕ್ಷವನ್ನು ಮತ್ತೆ ಕಟ್ಟಿ ಬೆಳೆಸುವ ಕೆಚ್ಚೆದೆಯನ್ನು ನನಗೆ ಒದಗಿಸಿದೆ. ಪ್ರಾದೇಶಿಕ ಪಕ್ಷ ಉಳಿಸಲು ಕಾರ್ಯಕರ್ತರು ಪ್ರಯತ್ನಿಸಬೇಕು’ ಎಂದರು.

ಈ ತಿಂಗಳು ಮಹಿಳೆಯರು ಮತ್ತು ಮತೀಯ ಅಲ್ಪಸಂಖ್ಯಾತರ ಸಮಾವೇಶ ನಡೆಲಾಗುವುದು, ಮುಂದಿನ ತಿಂಗಳು ಉತ್ತರ ಕರ್ನಾಟಕದಲ್ಲಿಬೃಹತ್‌ ರೈತ ಸಮಾವೇಶದ ಜತೆಗೆ ಹಿಂದುಳಿದ ವರ್ಗದವರ ಹಾಗೂ ಪರಿಶಿಷ್ಟ ಜಾತಿ, ಪಂಗಡದವರ ಸಮಾವೇಶ ನಡೆಸಲಾಗುವುದು ಎಂದರು.

ಆಗಸ್ಟ್‌ 20ರಿಂದ ನಡೆಸಲು ಉದ್ದೇಶಿಸಿದ ಪಾದಯಾತ್ರೆಯನ್ನು ಭಾರಿ ಮಳೆ ಹಾಗೂ ಹಬ್ಬ ಹರಿದಿನಗಳ ಸಲುವಾಗಿ 2 ತಿಂಗಳು ಮುಂದೂಡಲಾಗಿದೆ ಎಂದು ಪಕ್ಷದ ಮುಖಂಡ ವೈ.ಎಸ್‌.ವಿ.ದತ್ತ ಪ್ರಕಟಿಸಿದರು.

ಜೆಡಿಎಸ್‌ ಅಧಿಕಾರದಲ್ಲಿದ್ದಾಗ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದ್ದಕ್ಕೆ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಲೀಲಾದೇವಿ ಆರ್‌.ಪ್ರಸಾದ್‌ ಬೇಸರ ವ್ಯಕ್ತಪಡಿಸಿದರು. ಬೆನ್ನಿಗೆ ಚೂರಿ ಹಾಕುವವರನ್ನು ಜತೆಗೆ ಇಟ್ಟುಕೊಳ್ಳುವ ಕುಮಾರಸ್ವಾಮಿ ಅವರ ಸ್ವಭಾವವನ್ನು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನಯವಾಗಿಯೇ ಚುಚ್ಚಿದರು.

ಬೆಟ್ಟಿಂಗ್‌: ನೂರಾರು ಕೋಟಿ ನಷ್ಟ, ಹಲವರು ಬೀದಿಪಾಲು

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್‌ ಗೆದ್ದೇ ಗೆಲ್ಲುತ್ತಾನೆ ಎಂದು ಹೇಳಿ ನೂರಾರು ಮಂದಿ ಬೆಟ್ಟಿಂಗ್‌ ಕಟ್ಟಿದ್ದರು. ಹಲವರು ತಮ್ಮ ಆಸ್ತಿಯನ್ನೇ ಅಡವಿಟ್ಟು, ಮಾರಾಟ ಮಾಡಿ ಬೆಟ್ಟಿಂಗ್ ಮಾಡಿದ್ದರು. ಇಂತಹ 100 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಇಂದು ಯಾರ‍್ಯಾರದೋ ಪಾಲಾಗಿದೆ, ಹಲವು ಕುಟುಂಬಗಳು ಬೀದಿಪಾಲಾಗಿವೆ. ಇದೆಲ್ಲವನ್ನೂ ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಯಾವ ಅರ್ಹತೆಯಲ್ಲಿ ಬಿಡಿಎ ಆಯುಕ್ತರನ್ನು ನೇಮಿಸಿದಿರಿ?

‘ಬಿಡಿಎ ಕಮಿಷನರ್‌ ಅವರನ್ನು ಯಾವ ಅರ್ಹತೆ ಆಧಾರದಲ್ಲಿ ಅಲ್ಲಿಗೆ ನಿಯುಕ್ತಿಗೊಳಿಸಿದಿರಿ? ಆ ಹುದ್ದೆ ಕೊಡಿ ಎಂದು ಹೇಳಿ ಅದೇ ವ್ಯಕ್ತಿ ನನ್ನ ಹತ್ತಿರಕ್ಕೂ ಬಂದಿದ್ದರು. ಅವರು ಒಡ್ಡಿದ ಆಮಿಷವನ್ನು ನಾನು ತಿರಸ್ಕರಿಸಿ ದೂರ ಇಟ್ಟಿದ್ದೆ. ಯಡಿಯೂರಪ್ಪ ಅವರು ಇಂದು ಯಾವ ರೀತಿ ಆಡಳಿತ ನಡೆಸುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ’ ಎಂದು ಕುಮಾರಸ್ವಾಮಿ ಹೇಳಿದರು.

**

ಕಾಂಗ್ರೆಸ್‌ ಸರ್ಕಾರದ ಎಲ್ಲ ಯೋಜನೆಗಳನ್ನು ಹಾಗೆಯೇ ಉಳಿಸಿಕೊಂಡು, ಆರ್ಥಿಕ ಶಿಸ್ತಿನೊಂದಿಗೆ ಹಲವು ಕೆಲಸ ಮಾಡಿದ್ದೇನೆ. ಆದರೆ ಜನರಿಗೆ ಉಪಕಾರ ಸ್ಮರಣೆ ಇಲ್ಲ
- ಎಚ್‌.ಡಿ.ಕುಮಾರಸ್ವಾಮಿ,ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.