ADVERTISEMENT

ಮಾಧ್ಯಮಗಳಿಗೆ ನಿರ್ಬಂಧ ಪತ್ರಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 20:25 IST
Last Updated 11 ಅಕ್ಟೋಬರ್ 2019, 20:25 IST

ಬೆಂಗಳೂರು: ವಿಧಾನಸಭೆ ಕಲಾಪ ವರದಿ ಮಾಡದಂತೆ ಟಿ.ವಿ ವಾಹಿನಿಗಳಿಗೆ ನಿರ್ಬಂಧ ವಿಧಿಸಿರುವ ಕ್ರಮವನ್ನು ಖಂಡಿಸಿ ಪತ್ರಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು ಸೇರಿದ್ದ ಪತ್ರಕರ್ತರು, ಮಾಧ್ಯಮಗಳಿಗೆ ವಿಧಿಸಿರುವ ನಿರ್ಬಂಧ ವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳು ಜನರ ಧ್ವನಿಯಾಗಿ ಕೆಲಸ ಮಾಡುತ್ತಿವೆ. ಬಿಜೆಪಿ ನೇತೃತ್ವದ ಸರ್ಕಾರ ಆ ಧ್ವನಿಯನ್ನೇಹತ್ತಿಕ್ಕಲು ಮುಂದಾಗಿದೆ. ಈ ಕ್ರಮವನ್ನು ಸಾಮೂಹಿಕವಾಗಿ ಖಂಡಿ ಸುತ್ತೇವೆ’ ಎಂದು ಪ್ರತಿಭಟನಾಕಾರರು ಹೇಳಿದರು.

ADVERTISEMENT

‘ಹೊಸ ಸರ್ಕಾರದ ಮೊದಲ ಅಧಿ ವೇಶನ ಈಗಾಗಲೇ ಆರಂಭವಾಗಿದೆ. ಇಂಥ ಸಂದರ್ಭದಲ್ಲೇ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ಚಾಲನೆ ನೀಡಲಾಗಿದೆ’ ಎಂದರು.

‘ರಾಜಕಾರಣಿಗಳು ವಿಧಾನಸಭೆಯಲ್ಲಿ ಏನೆಲ್ಲ ಮಾಡುತ್ತಾರೆ, ಯಾವೆಲ್ಲ ಸಿನಿಮಾ ನೋಡುತ್ತಾರೆಂಬುದು ಜನರಿಗೆ ಗೊತ್ತಿದೆ. ಅಂಥದ್ದೆಲ್ಲವನ್ನೂ ಮಾಧ್ಯಮ ಜನರಿಗೆ ತೋರಿಸಿದೆ. ತಮ್ಮ ಹುಳುಕು ಬಯಲಾಗುತ್ತದೆಂಬ ಕಾರಣಕ್ಕೆ ಈ ರೀತಿ ಮಾಡಿದೆ. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಶಾಸಕ ಎಚ್‌.ಡಿ. ಕುಮಾರಸ್ವಾಮಿ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಬೆಂಬಲ ಸೂಚಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಮತ್ತು ಕರ್ನಾಟಕ ಪತ್ರಕರ್ತೆಯರ ಸಂಘದ ಸದಸ್ಯರು
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.