ADVERTISEMENT

ಸದಾಶಿವ ವರದಿ ಜಾರಿಗೆ ಆಗ್ರಹ, ಸಿಎಂ ಮನೆಗೆ ನಾಳೆ ಮುತ್ತಿಗೆ: ಮಾದಿಗ ದಂಡೋರ ಸಮಿತಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 19:59 IST
Last Updated 18 ಮಾರ್ಚ್ 2023, 19:59 IST

ಬೆಂಗಳೂರು: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಮಾ. 20ರಂದು ಅರಬೆತ್ತಲೆ ಪ್ರತಿಭಟನೆ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಮಾದಿಗ ದಂಡೋರ ಸಮಿತಿ ತಿಳಿಸಿದೆ.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಎಂ. ದೇವರಾಜ್ ಅವರು, ‘ಸದಾಶಿವ ಆಯೋಗದ ವರದಿಯನ್ನು ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ತಮಿಳುನಾಡಿನ ಮಾದರಿಯಲ್ಲಿ ಅರುಂಧತಿಯರ್‌ ಸಮುದಾಯಕ್ಕೆ ಶೇ 2.84 ರಷ್ಟು ಮೀಸಲಾತಿಯನ್ನು ನೀಡಿದಂತೆ ಸುಪ್ರೀಂ ಕೋರ್ಟ್‌ ನ್ಯಾ. ಅರುಣ್‌ ಮಿಶ್ರಾ ತೀರ್ಪಿನಂತೆ ರಾಜ್ಯ ಸರ್ಕಾರಕ್ಕಿರುವ ಅಧಿಕಾರವನ್ನು ಬಳಸಿಕೊಂಡು ಪ್ರತ್ಯೇಕವಾಗಿ ಮಾದಿಗ–ಮಾದಿಗ ಸಂಬಂಧಿತ ಜಾತಿಗಳಿಗೆ ಶೇ 6ರಷ್ಟು ಮೀಸಲಾತಿಯನ್ನು ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಯೊಂದು ಪಕ್ಷವೂ ಮಾದಿಗ ಸಮುದಾಯಕ್ಕೆ ಕನಿಷ್ಠ 15 ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು’ ಎಂದು ಅವರು ಹೇಳಿದರು.

ADVERTISEMENT

ರಾಜ್ಯದಲ್ಲಿರುವ ಎಲ್ಲ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಸದಾಶಿವ ಆಯೋಗದ ವರದಿ ಪರ ಹೋರಾಟಗಾರರ ಮೇಲಿರುವ ಪ್ರಕರಣಗಳನ್ನು ರದ್ದುಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.