ADVERTISEMENT

ನ್ಯಾಯಾಂಗ ವ್ಯವಸ್ಥೆಯಲ್ಲೂ ಜಾತಿ ಪದ್ಧತಿ: ನ್ಯಾ. ಬಿ.ವೀರಪ್ಪ ಕಳವಳ

‘ನ್ಯಾಯಾಂಗ ಒಳನೋಟ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 23:48 IST
Last Updated 3 ಫೆಬ್ರುವರಿ 2023, 23:48 IST
‘ನ್ಯಾಯಾಂಗ ಒಳನೋಟ’ ಪುಸ್ತಕವನ್ನು ನ್ಯಾಯಮೂರ್ತಿ ಬಿ.ವೀರಪ್ಪ ಬಿಡುಗಡೆ ಮಾಡಿದರು. (ಎಡದಿಂದ) ಜನ ಪ್ರಕಾಶನದ ಬಿ.ರಾಜಶೇಖರಮೂರ್ತಿ, ನ್ಯಾಯಮೂರ್ತಿ ಎಚ್‌.ಎನ್.ನಾಗಮೋಹನದಾಸ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ, ವಕೀಲ ಎ.ಪಿ. ರಂಗನಾಥ್ ಇದ್ದರು –ಪ್ರಜಾವಾಣಿ ಚಿತ್ರ
‘ನ್ಯಾಯಾಂಗ ಒಳನೋಟ’ ಪುಸ್ತಕವನ್ನು ನ್ಯಾಯಮೂರ್ತಿ ಬಿ.ವೀರಪ್ಪ ಬಿಡುಗಡೆ ಮಾಡಿದರು. (ಎಡದಿಂದ) ಜನ ಪ್ರಕಾಶನದ ಬಿ.ರಾಜಶೇಖರಮೂರ್ತಿ, ನ್ಯಾಯಮೂರ್ತಿ ಎಚ್‌.ಎನ್.ನಾಗಮೋಹನದಾಸ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ, ವಕೀಲ ಎ.ಪಿ. ರಂಗನಾಥ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನ್ಯಾಯಾಂಗ ವ್ಯವಸ್ಥೆಯಲ್ಲೂ ಜಾತಿ ಪದ್ಧತಿ ತುಳುಕಾಡುತ್ತಿದೆ. ಇದರಿಂದ ದೇಶ ಹಾಳಾಗುತ್ತಿದೆ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಕಳವಳ ವ್ಯಕ್ತಪಡಿಸಿದರು.

ನ್ಯಾಯಮೂರ್ತಿ ಎಚ್‌.ಎನ್.ನಾಗಮೋಹನದಾಸ್ ಅವರ ‘ನ್ಯಾಯಾಂಗ ಒಳನೋಟ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ನ್ಯಾಯಪೀಠದಲ್ಲಿ ಕುಳಿತಾಗ ಧರ್ಮ ಮತ್ತು ಅಧರ್ಮ ಎರಡೇ ಕಾಣಬೇಕು. ಜಾತಿ ಅಥವಾ ಸಂಬಂಧಗಳು ಅಡ್ಡವಾಗಬಾರದು. ತಪ್ಪು ಮಾಡಿದವರು ತನ್ನ ಪತ್ನಿ ಅಥವಾ ಮಕ್ಕಳೇ ಆಗಿದ್ದರೂ ನಿರ್ದಾಕ್ಷಿಣ್ಯವಾಗಿ ಜೈಲಿಗೆ ಕಳುಹಿಸುವ ಧೈರ್ಯವನ್ನು ನ್ಯಾಯಮೂರ್ತಿಗಳು ಬೆಳಸಿಕೊಳ್ಳಬೇಕು’ ಎಂದರು.

ಭ್ರಷ್ಟಾಚಾರ ಈ ದೇಶದ ದೊಡ್ಡ ಪಿಡುಗು. ಶೇ 99ರಷ್ಟು ಅಂಕಗಳನ್ನು ಪಡೆದು ದೊಡ್ಡ ಹುದ್ದೆಗೆ ಹೋದ ನಂತರ ಭ್ರಷ್ಟನಾದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ADVERTISEMENT

ಭ್ರಷ್ಟಾಚಾರದ ವಿರುದ್ಧದ ಹೋರಾಟ ಮನೆಯಿಂದಲೇ ಆರಂಭವಾಗಬೇಕು. ಸಂಬಳಕ್ಕಿಂತ ಹೆಚ್ಚಿನ ಹಣ ತಂದರೆ ಅದನ್ನು ಪ್ರಶ್ನಿಸುವ ಪತ್ನಿ ಮತ್ತು ಮಕ್ಕಳು ಇದ್ದರೆ ಮಾತ್ರ ಭ್ರಷ್ಟಾಚಾರ ತನಾಗಿಯೇ ಕಡಿಮೆಯಾಗಲಿದೆ ಎಂದು ಹೇಳಿದರು.

ಹೈಕೋರ್ಟ್ ಎದುರಿನ ಕಲ್ಲು ಕಟ್ಟಡದಲ್ಲಿ ಕುಳಿತವರ ಹೃದಯಗಳೂ ಕಲ್ಲುಗಳಾಗಿವೆ. ಹೈಕೋರ್ಟ್‌ ಆದೇಶಗಳನ್ನು 8ರಿಂದ 10 ವರ್ಷಗಳು ಕಳೆದರೂ ಪಾಲಿಸುವುದಿಲ್ಲ. ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾದ ಬಳಿಕವೂ ಸಮಯ ಕೇಳುವ ಪರಿಪಾಟ ಬೆಳಸಿಕೊಂಡಿದ್ದಾರೆ. ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಿದಾಗ ಆದೇಶ ಪಾಲನೆಯಾಗುತ್ತವೆ. ಅಧಿಕಾರಿ ವರ್ಗದ ಈ ರೀತಿ ಬೇಜವಾಬ್ದಾರಿಗಳನ್ನು ನ್ಯಾಯಾಂಗ ಸಹಿಸಬಾರದು ಎಂದರು.

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ ಮಾತನಾಡಿ, ‘ಒಳ್ಳೆಯ ನ್ಯಾಯಮೂರ್ತಿ ಆಗಬೇಕೆಂದರೆ ಅವರಿಗೆ ಅಂತಃಕರಣ ಇರಬೇಕಾಗುತ್ತದೆ. ನ್ಯಾಯಮೂರ್ತಿಗಳ ಮೇಲೆ ಮತ್ತೊಂದು ಕಾವಲು ವ್ಯವಸ್ಥೆ ಇಲ್ಲ. ಆದರೆ, ಅವರಿಗೆ ಆತ್ಮಸಾಕ್ಷಿಯೇ ಕಾವಲುಗಾರ. ಕಾವಲಿದ್ದವರಿಗೆ ನಮ್ಮ ತಪ್ಪುಗಳು ಗೊತ್ತಾಗದಿದ್ದರೂ, ನಮ್ಮ ಆತ್ಮಸಾಕ್ಷಿಗೆ ಗೊತ್ತಾಗಲಿದೆ. ಆತ್ಮಸಾಕ್ಷಿಯಂತೆ ನಡೆದುಕೊಂಡರೆ ಸಾಕು’ ಎಂದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಮಾತನಾಡಿ, ‘ನ್ಯಾಯಾಂಗದ ಸ್ವಾತಂತ್ರಕ್ಕೆ ಧಕ್ಕೆ ಬರುವ ಆತಂಕ ಕಾಡುತ್ತಿದೆ. ನ್ಯಾಯಾಂಗವನ್ನೂ ತಮ್ಮ ಹಿಡಿತಕ್ಕೆ ತಗೆದುಕೊಳ್ಳಲು ಶಾಸಕಾಂಗ, ಅದರಲ್ಲೂ ಉಪರಾಷ್ಟ್ರಪತಿಯೇ ಅದಕ್ಕೆ ಪೂರಕವಾದ ಮಾತುಗಳನ್ನಾಡಿರುವುದು ದುರಂತ’ ಎಂದು ಹೇಳಿದರು.

ಬಿಡುಗಡೆಯಾದ ಪುಸ್ತಕ

ಪುಸ್ತಕ: ನ್ಯಾಯಾಂಗ ಒಳನೋಟ

ಲೇಖಕರು: ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್

ಪುಟ: 120

ಬೆಲೆ: ₹120

ಪ್ರಕಾಶನ: ಜನ ಪ್ರಕಾಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.