ADVERTISEMENT

ನ್ಯಾಯಮೂರ್ತಿ ಪಾಲೆಕಂಡ ಪಿ.ಬೋಪಣ್ಣ ನಿಧನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2023, 15:26 IST
Last Updated 20 ಜುಲೈ 2023, 15:26 IST
ಪಿ.ಬೋಪಣ್ಣ
ಪಿ.ಬೋಪಣ್ಣ   

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಾಲೆಕಂಡ ಪಿ. ಬೋಪಣ್ಣ (96) ಗುರುವಾರ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ಒಬ್ಬ ಪುತ್ರಿ ಮತ್ತು ಮೂವರು ಪುತ್ರರಿದ್ದಾರೆ.

1927ರ ಏಪ್ರಿಲ್‌ 23ರಂದು ಜನಿಸಿದ್ದ ಬೋಪಣ್ಣ ಮದ್ರಾಸ್‌ ಕ್ರಿಶ್ಚಿಯನ್‌ ಕಾಲೇಜು ಮತ್ತು ಮದ್ರಾಸ್‌ ಕಾನೂನು ಕಾಲೇಜಿನಲ್ಲಿ ಪದವಿ ಪಡೆದು ಮದ್ರಾಸ್‌ ಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ನಂತರ ಬೆಂಗಳೂರಿಗೆ ಮರಳಿದ ಅವರು, 1977ರ ನವೆಂಬರ್ 28ರಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡು 1989ರಲ್ಲಿ ನಿವೃತ್ತಿ ಹೊಂದಿದ್ದರು.

’ಪಾಲೆಕಂಡ ಬೋಪಣ್ಣ ಕರ್ನಾಟಕ ಹೈಕೋರ್ಟ್‌ ಕಂಡ ಒಬ್ಬ ಅತ್ಯಂತ ಮೇಧಾವಿ, ನ್ಯಾಯವೇತ್ತರು. ನ್ಯಾಯಮೂರ್ತಿಯಾಗಿ ಅವರು ಭೂ ಸುಧಾರಣೆ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಾವಿರಾರು ಮಹತ್ವದ ತೀರ್ಪುಗಳನ್ನು ನೀಡಿದ್ದರು. ಶ್ರದ್ಧೆ ಮತ್ತು ಪರಿಶ್ರಮದ ಪ್ರತೀಕವಾಗಿದ್ದ ಅವರೊಬ್ಬ ಸಾರ್ವಕಾಲಿಕ ಶಿಸ್ತಿನ ಸಿಪಾಯಿಯಾಗಿದ್ದರು. ನ್ಯಾಯಾಂಗದ ಪ್ರಾಜ್ಞತೆಗೆ ಮಾದರಿಯಾಗಿದ್ದರು‘ ಎಂದು ಹಿರಿಯ ವಕೀಲರಾದ ಉದಯ ಹೊಳ್ಳ, ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ  ಸ್ಮರಿಸಿದ್ದಾರೆ.

ADVERTISEMENT

ರಿಚ್ಮಂಡ್‌ ಟೌನ್‌ನಲ್ಲಿರುವ ಅವರ ನಿವಾಸದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಶುಕ್ರವಾರ (ಜು.21) ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

ವಿವರಗಳಿಗೆ ಪುತ್ರ ಪಿ.ಬಿ.ಅಪ್ಪಯ್ಯ ಅವರ ದೂರವಾಣಿ ಸಂಖ್ಯೆ: 98450–15216

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.