ADVERTISEMENT

ಪತಿಗೆ ಚಿತ್ರಹಿಂಸೆ ನೀಡಿ ಕೊಲೆ: ಪತ್ನಿ, ದಂಪತಿ ಬಂಧನ

ಚರಂಡಿಯಲ್ಲಿ ಮೃತದೇಹ ಪತ್ತೆಯಾದ ಪ್ರಕರಣ * ಕೃತ್ಯಕ್ಕೆ ಪತ್ನಿಯಿಂದಲೂ ಸಹಕಾರ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 4:10 IST
Last Updated 13 ಜುಲೈ 2022, 4:10 IST
   

ಬೆಂಗಳೂರು: ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಓಂನಾಥ್ ಸಿಂಗ್ (45) ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಪತ್ನಿ ಹಾಗೂ ಸ್ನೇಹಿತ ವಿಶಾಲ್ ಹಾಗೂ ಆತನ ಪತ್ನಿಯನ್ನು ಬಂಧಿಸಿದ್ದಾರೆ.

‘ಓಂನಾಥ್‌ ಸಿಂಗ್‌ ಅವರ ಪತ್ನಿ ಗುಂಜಾದೇವಿ (35), ಸ್ನೇಹಿತ ವಿಶಾಲ್ ಪ್ರಜಾಪತಿ (24) ಹಾಗೂ ಆತನ ಪತ್ನಿ ರೂಬಿ (23) ಬಂಧಿತರು. ಮೂವರು ಸೇರಿಕೊಂಡು ಓಂನಾಥ್‌ಸಿಂಗ್ ಅವರಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದರು. ಯಾರಿಗೂ ಅನುಮಾನ ಬಾರದಂತೆ ಪ್ಲಾಸ್ಟಿಕ್‌ನಲ್ಲಿ ಮೃತದೇಹ ತುಂಬಿ, ಚರಂಡಿಯಲ್ಲಿ ಎಸೆದಿದ್ದರು’ ಎಂದು ಪೊಲೀಸರು ಹೇಳಿದರು.

‘ಕೊಲೆ ನಂತರ ಮನೆ ಖಾಲಿ ಮಾಡಿದ್ದ ಆರೋಪಿಗಳು, ಮಂಗಳೂರಿಗೆ ಹೋಗಿ ನೆಲೆಸಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಿ, ನಗರಕ್ಕೆ ಕರೆತರಲಾಗಿದೆ’ ಎಂದೂ ತಿಳಿಸಿದರು.

ADVERTISEMENT

ಗುಜರಾತ್‌ನಲ್ಲಿ ಪರಿಚಯ: ‘ಓಂನಾಥ್ ಸಿಂಗ್ ಹಾಗೂ ವಿಶಾಲ್, ಗುಜರಾತ್‌ನಲ್ಲಿ ಪರಿಚಯವಾಗಿದ್ದರು. ಆತ್ಮೀಯ ಸ್ನೇಹಿತರಾಗಿದ್ದ ಇಬ್ಬರೂ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ತಮ್ಮ ಜೊತೆ ಪತ್ನಿಯರನ್ನೂ ಕರೆತಂದಿದ್ದರು’ ಎಂದು ಪೊಲೀಸರು ಹೇಳಿದರು.

‘ಬೆಂಗಳೂರಿನಲ್ಲಿ ಖರ್ಚು ಹೆಚ್ಚು ಎಂಬುದಾಗಿ ತಿಳಿದಿದ್ದ ಓಂನಾಥ್ ಸಿಂಗ್ ಹಾಗೂ ವಿಶಾಲ್ ದಂಪತಿ, ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ಒಂದೇ ಮನೆಯಲ್ಲೇ ನೆಲೆಸಿದ್ದರು. ಇಬ್ಬರೂ ದಂಪತಿಗಳ ನಡುವೆ ಆತ್ಮೀಯತೆ ಇತ್ತು’ ಎಂದು ಪೊಲೀಸರು ಹೇಳಿದರು.

ಸ್ನೇಹಿತನ ಪತ್ನಿ ಜೊತೆ ಸಲುಗೆ: ‘ವಿಶಾಲ್ ಪತ್ನಿ ರೂಬಿ ಜೊತೆ ಓಂನಾಥ್‌ ಸಿಂಗ್ ಸಲುಗೆ ಇರಿಸಿಕೊಂಡಿದ್ದರು. ಕೆಲಸದ ನಿಮಿತ್ತ ವಿಶಾಲ್ ಇತ್ತೀಚೆಗೆ ಗುಜರಾತ್‌ಗೆ ಹೋಗಿದ್ದರು. ಈ ಸಂದರ್ಭದಲ್ಲಿ ಓಂನಾಥ್‌ ಸಿಂಗ್ ಹಾಗೂ ರೂಬಿ ಖಾಸಗಿ ಕ್ಷಣಗಳನ್ನು ಕಳೆಯುತ್ತಿದ್ದರೆಂದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಮಾಹಿತಿ ನೀಡದೇ ವಿಶಾಲ್ ಮನೆಗೆ ಬಂದಿದ್ದರು. ಪತ್ನಿ ರೂಬಿ ಹಾಗೂ ಸ್ನೇಹಿತನ ಸಲುಗೆ ನೋಡಿದ್ದರು. ಇದೇ ವಿಚಾರವಾಗಿ ಮನೆಯಲ್ಲಿ ಜಗಳ ನಡೆದಿತ್ತು. ತನ್ನ ತಪ್ಪು ಇಲ್ಲವೆಂದಿದ್ದ ರೂಬಿ, ಓಂನಾಥ್‌ ಸಿಂಗ್ ಬೆದರಿಕೆಯೊಡ್ಡಿ ಸಲುಗೆ ಸಾಧಿಸಿದ್ದನೆಂದು ಹೇಳಿದ್ದರು. ಸಿಟ್ಟಾದ ವಿಶಾಲ್, ಪತ್ನಿ ಜೊತೆ ಸೇರಿ ಓಂನಾಥ್‌ ಮೇಲೆ ಹಲ್ಲೆ ಮಾಡಿದ್ದ.’

‘ವಿಷಯ ಗೊತ್ತಾಗುತ್ತಿದ್ದಂತೆ ಪತ್ನಿ ಗುಂಜಾದೇವಿ ಸಹ ಪತಿ ವಿರುದ್ಧ ಗರಂ ಆಗಿದ್ದರು. ವಿಶಾಲ್ ಹಾಗೂ ರೂಬಿ ಜೊತೆ ಸೇರಿ ಪತಿಗೆ ಕಿರುಕುಳ ನೀಡಿದ್ದರು. ಮೂರು ದಿನ ಊಟ ನೀಡದೇ ಕೊಠಡಿಯಲ್ಲಿ ಓಂನಾಥ್‌ ಸಿಂಗ್‌ ಅವರನ್ನು ಕೂಡಿ ಹಾಕಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ನಂತರ, ಮೃತದೇಹವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿ ಚರಂಡಿಯಲ್ಲಿ ಬಿಸಾಕಿ ಆರೋಪಿಗಳು ಪರಾರಿಯಾಗಿದ್ದರು’ ಎಂದೂ ಹೇಳಿದರು.

₹15,000 ಸಾಲ ವಿಷಯಕ್ಕೂ ಜಗಳ: ‘ವಿಶಾಲ್ ಬಳಿ ಓಂನಾಥ್‌ಸಿಂಗ್ ₹ 15,000 ಸಾಲ ಪಡೆದಿದ್ದರು. ಅದನ್ನು ವಾಪಸು ಕೊಟ್ಟಿರಲಿಲ್ಲ. ಈ ವಿಚಾರಕ್ಕೂ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು’ ಎಂದು ಪೊಲೀಸರು ತಿಳಿಸಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.