ADVERTISEMENT

ಕಲಾಸಿಪಾಳ್ಯ ಗಲಾಟೆ; ‍ದೂರು–ಪ್ರತಿ ದೂರು ದಾಖಲು

ಕಾರ್ಪೊರೇಟರ್ ಪತಿ ವಿರುದ್ಧವೂ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 15 ಮೇ 2020, 19:24 IST
Last Updated 15 ಮೇ 2020, 19:24 IST

ಬೆಂಗಳೂರು: ಕಲಾಸಿಪಾಳ್ಯ ಮಾರುಕಟ್ಟೆ ಪಾದಚಾರಿ ಮಾರ್ಗದಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸುವ ವೇಳೆ ನಡೆದಿದ್ದ ಗಲಾಟೆ ಸಂಬಂಧ ದೂರು–ಪ್ರತಿ ದೂರು ದಾಖಲಾಗಿದೆ.‌

‘ಸ್ಥಳೀಯ ವ್ಯಾಪಾರಿಗಳು ನೀಡಿರುವ ದೂರು ಆಧರಿಸಿ ಕಾರ್ಪೊರೇಟರ್ ಪ್ರತಿಭಾ ಅವರ ಪತಿ ಧನರಾಜ್, ಮಗ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಧನರಾಜ್ ಸಹ ಪ್ರತಿ ದೂರು ನೀಡಿದ್ದಾರೆ. ಸ್ಥಳೀಯ ವ್ಯಾಪಾರಿಗಳಾದ ಸೆಂಥಿಲ್‌, ಮೊಹಮ್ಮದ್, ಪ್ರಕಾಶ್ ಹಾಗೂ ಇತರರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು.

ADVERTISEMENT

‘ಲಾಕ್‌ಡೌನ್‌ ಹಾಗೂ ನಿಷೇಧಾಜ್ಞೆ ವೇಳೆಯಲ್ಲೂ ಗುಂಪು ಸೇರಿದ ಆರೋಪದಡಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಲ್ಲ ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದರು.

ಸಗಣಿ ಎರಚಿದ್ದರು: ‘ಪಾದಚಾರಿ ಮಾರ್ಗದ ಅಂಗಡಿಗಳನ್ನು ತೆರವುಗೊಳಿಸಲು ಧನರಾಜ್ ಹಾಗೂ ಇತರರು ಬಿಬಿಎಂಪಿ ಅಧಿಕಾರಿಗಳ ಜೊತೆ ಹೋಗಿದ್ದ ವೇಳೆಯಲ್ಲಿ ಗಲಾಟೆ ನಡೆದಿತ್ತು. ಪ್ರತಿಭಟನೆ ನಡೆಸಿದ್ದ ಸ್ಥಳೀಯ ವ್ಯಾಪಾರಿಗಳು ಸಗಣಿ ಎರಚಿ ಆಕ್ರೋಶ ವ್ಯಕ್ತಪಡಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಹಫ್ತಾ ನೀಡುವಂತೆ ಕಾರ್ಪೊರೇಟರ್ ಪತಿ ಪೀಡಿಸುತ್ತಿದ್ದರು. ಹಣ ಕೊಡದಿದ್ದಕ್ಕೆ ಅಂಗಡಿ ತೆರವು ಮಾಡಲು ಬಂದಿದ್ದರೆಂದು ವ್ಯಾಪಾರಿಗಳು ಆರೋಪಿಸಿದ್ದರು. ಈಗ ಎರಡೂ ಕಡೆಯವರು ದೂರು ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.