ADVERTISEMENT

ಕಾಮಾಕ್ಷಿಪುರ: ಖಾತೆಗಾಗಿ 20 ವರ್ಷಗಳಿಂದ ಅಲೆದಾಟ

ಸಿ.ಎಸ್.ನಿರ್ವಾಣ ಸಿದ್ದಯ್ಯ
Published 14 ನವೆಂಬರ್ 2018, 20:02 IST
Last Updated 14 ನವೆಂಬರ್ 2018, 20:02 IST
ಹನುಮಂತರಾಯಪ್ಪ 
ಹನುಮಂತರಾಯಪ್ಪ    

ಬೆಂಗಳೂರು: ಹೆಸರಘಟ್ಟ ಹೋಬಳಿ ಕಾಮಾಕ್ಷಿಪುರ ಗ್ರಾಮದ ರೈತ ಹನುಮಂತರಾಯಪ್ಪ ಎಂಬುವವರು 20 ವರ್ಷಗಳಿಂದ ತಾನು ಗೇಣಿ ಸಾಗುವಳಿ ಮಾಡಿದ ಜಮೀನಿನ ಖಾತೆ ಮಾಡಿಸಿಕೊಳ್ಳಲು ತಾಲ್ಲೂಕು ಪಂಚಾಯಿತಿಗೆ ಅಲೆದಾಡುತ್ತಿದ್ದಾರೆ. ಅವರನ್ನು ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಗ್ರಾಮದ ಸರ್ವೆ ನಂ. 37ರ ಜಮೀನು ಶ್ರೀಕಂಠಯ್ಯ ಎಂಬುವವರಿಗೆ ಸೇರಿತ್ತು. ಇದರ 38 ಗುಂಟೆ ಜಾಗದಲ್ಲಿ ಹನುಮಂತರಾಯಪ್ಪ ಅವರ ಹಿರಿಯರು 90 ವರ್ಷಗಳಿಂದ ಗೇಣಿ ಸಾಗುವಳಿ ಮಾಡುತ್ತಿದ್ದರು. ಉಳುವವನೆ ಭೂಮಿಯ ಒಡೆಯ ಕಾನೂನು ಬಂದಾಗ ಹನುಮಂತರಾಯಪ್ಪ ಅವರು 38 ಗುಂಟೆ ಜಾಗವನ್ನು ತಮ್ಮ ಹೆಸರಿಗೆ ನೋಂದಾಯಿಸಿ ಕೊಡಬೇಕೆಂದು ನ್ಯಾಯಾಲಯಕ್ಕೆ 2000ನೇ ಇಸವಿಯಲ್ಲಿ ಅರ್ಜಿ ನೀಡಿದರು.

ಸ್ವತಃ ಶ್ರೀಕಂಠಯ್ಯ ಅವರೇ ನ್ಯಾಯಾಲಯಕ್ಕೆ ಹಾಜರಾಗಿ, 38 ಗುಂಟೆ ಜಾಗವು ಹನುಮಂತರಾಯಪ್ಪ ಅವರಿಗೆ ಸೇರತಕ್ಕದ್ದು ಎಂದು ಲಿಖಿತ ಹೇಳಿಕೆ ನೀಡಿದರು. ಐದು ವರ್ಷಗಳ ಕಾಲ ವಿಚಾರಣೆ ಮಾಡಿದ ಅಂದಿನ ವಿಶೇಷ ಭೂಸ್ವಾಧೀನಾಧಿಕಾರಿ ಬಿ.ನಾಗರಾಜ್ ಅವರು 38 ಗುಂಟೆ ಜಾಗವು ಹನುಮಂತರಾಯಪ್ಪ ಅವರಿಗೆ ಸೇರತಕ್ಕದ್ದು ಎಂದು ಆದೇಶವನ್ನು ನೀಡಿದರು. ಈ ಆದೇಶದ ಮೇಲೆ ಹಕ್ಕುಪತ್ರ ನೀಡಲಾಯಿತು.

ADVERTISEMENT

‘ಹತ್ತು ವರ್ಷಗಳ ಹಿಂದೆ ಮೆಜೆಸ್ಟಿಕ್‍ನಲ್ಲಿದ್ದ ತಾಲ್ಲೂಕು ಕಚೇರಿಗೆ ತಿಂಗಳಿಗೊಮ್ಮೆ ಹೋಗಿ ಅಧಿಕಾರಿಗಳನ್ನು ಭೇಟಿ ಮಾಡಿ ಬರುತ್ತಿದ್ದೆ. ಆಗ ಅವರು ಅರ್ಜಿ ಪರಿಶೀಲಿಸುತ್ತಿದ್ದೇವೆ ಎಂದು ಹೇಳುತ್ತಿದ್ದರು. ಇಪ್ಪತ್ತು ವರ್ಷಗಳು ಕಳೆದರೂ ಅವರ ಪರಿಶೀಲನೆ ಇನ್ನೂ ಮುಗಿದಿಲ್ಲ. ಹಲವು ಅಧಿಕಾರಿಗಳು ಬದಲಾಗಿದ್ದಾರೆ’ ಎನ್ನುತ್ತಾರೆ ರೈತ ಹನುಮಂತರಾಯಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.