ಬೆಂಗಳೂರು: ‘ಕನ್ನಡ ಮಾತನಾಡಲಿಲ್ಲವೆಂಬ ಕಾರಣಕ್ಕೆ ಮಹಿಳೆಯರ ಗುಂಪು ನನ್ನ ಮೇಲೆ ಹಲ್ಲೆ ಮಾಡಿದೆ’ ಎಂದು ಆರೋಪಿಸಿ ನೀಲಾಂಜಿತ್ ಕೌರ್ ಎಂಬುವರು ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದಾರೆ.
‘ದೊಡ್ಡಬೊಮ್ಮಸಂದ್ರದಲ್ಲಿ ನೆಲೆಸಿರುವ 46 ವರ್ಷದ ನೀಲಾಂಜಿತ್, ನ. 25ರಂದು ರಾತ್ರಿ 10 ಗಂಟೆ ಸುಮಾರಿಗೆ ನಡೆದಿರುವ ಘಟನೆ ಸಂಬಂಧ ದೂರು ನೀಡಿದ್ದಾರೆ. ಐವರು ಅಪರಿಚಿತ ಮಹಿಳೆಯರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ನೀಲಾಂಜಿತ್ ಅವರು ದೊಡ್ಡಬೊಮ್ಮಸಂದ್ರದ ಸರ್ಕಾರಿ ಶಾಲೆ ಬಳಿ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಇದೇ ವೇಳೆ, 6 ವರ್ಷದ ಮಗುವೊಂದು ವಾಹನಕ್ಕೆ ಅಡ್ಡ ಬಂದಿತ್ತು. ವಾಹನ ನಿಲ್ಲಿಸಿದ್ದ ನೀಲಾಂಜಿತ್, ‘ಮಗುವನ್ನು ನೋಡಿಕೊಳ್ಳಲು ಆಗುವುದಿಲ್ಲವೇ?’ ಎಂದು ಸ್ಥಳದಲ್ಲಿದ್ದ ಪೋಷಕರಿಗೆ ಹಿಂದಿಯಲ್ಲಿ ಹೇಳಿದ್ದರು. ಅವರ ಜೊತೆಗೆ ಜಗಳ ತೆಗೆದಿದ್ದ ಆರೋಪಿತ ಸ್ಥಳೀಯ ಮಹಿಳೆಯರು, ‘ಕನ್ನಡ ಬರುವುದಿಲ್ಲವೇ? ಇದು ಕರ್ನಾಟಕ. ಕನ್ನಡ ಮಾತಾಡು’ ಎಂದಿದ್ದರು. ಅಷ್ಟಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿತ್ತು. ಇದೇ ಸಂದರ್ಭದಲ್ಲೇ ತಮ್ಮ ಮೇಲೆ ಹಲ್ಲೆ ನಡೆದಿರುವುದಾಗಿ ದೂರುದಾರರು ಆರೋಪಿಸಿದ್ದಾರೆ. ಆರೋಪಿಗಳನ್ನು ವಿಚಾರಣೆ ಮಾಡಬೇಕಿದೆ’ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.