ನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅವರನ್ನು ಗೌರವಿಸಲಾಯಿತು. ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಎಸ್. ಮಹದೇವಯ್ಯ, ನಿರ್ಮಲಾ ಮಠಪತಿ, ಪ್ರೊ. ಎಸ್.ಜಿ. ಸಿದ್ದರಾಮಯ್ಯ,ಉಪಸ್ಥಿತರಿದ್ದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕಿಂತ ನಾನು ಗಳಿಸಿರುವ ನಾಡಿನ ಜನರ ಅಭಿಮಾನ ದೊಡ್ಡದು’ ಎಂದು ಸಮ್ಮೇಳನದ ನಿಯೋಜಿತ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಜಾನಪದ ಅಕಾಡೆಮಿ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
‘ಕನ್ನಡ ನೆಲದಲ್ಲಿ ಹುಟ್ಟಿದ ಮೇಲೆ ಒಂದಿಷ್ಟು ಕೆಲಸ ಮಾಡಬೇಕು. ಕನ್ನಡಕ್ಕಾಗಿ ಕೆಲಸ ಮಾಡುವ ಸಹಸ್ರಾರು ಜನರು ಇದ್ದಾರೆ. ಅದರಲ್ಲಿ ನಾನೂ ಒಬ್ಬ. ಸಾಮಾನ್ಯ ಪರಿಚಾರಕನಾಗಿ ಕನ್ನಡ ಉಳಿಸಿ, ಬೆಳೆಸುವ ಕಾರ್ಯವನ್ನು ಮಾಡಿದ್ದೇನೆ’ ಎಂದರು.
‘ಸಮಾರಂಭದಲ್ಲಿ ಮಾತನಾಡಿದ ಗಣ್ಯರು ನನ್ನನ್ನು ಹೊಗಳಿ ಮಾತನಾಡಿರಬೇಕು ಎನಿಸುತ್ತದೆ. ಆದರೆ, ಏನು ಮಾಡುವುದು ನನ್ನ ಕಿವಿ ಕೇಳಿಸುವಾಗ ಹೊಗಳಿದ್ದರೆ ಚೆನ್ನಾಗಿತ್ತು’ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಎಸ್.ಮಹದೇವಯ್ಯ ಅವರು ನೀಡಿದ ₹ 50 ಸಾವಿರ ಗೌರವಧನವನ್ನು ಗ್ರಾಮ ವಿಕಾಸ ಪ್ರತಿಷ್ಠಾನದ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ, ‘ವ್ಯಕ್ತಿ ಸರ್ವಾಧಿಕಾರಿಯಾದರೆ ಜನರೇ ಬುದ್ದಿ ಕಲಿಸುತ್ತಾರೆ. ರಾಜ್ಯ, ದೇಶ ಅಥವಾ ಸಂಸ್ಥೆಯಾಗಲಿ, ಯಾವುದೇ ಕ್ಷೇತ್ರವಾಗಿರಲಿ ಸರ್ವಾಧಿಕಾರಕ್ಕೆ ಅವಕಾಶ ಇರುವುದಿಲ್ಲ. ಕನ್ನಡ ಸಾಹಿತ್ಯ ಪರಿಷತ್ ಹಾದಿ ತಪ್ಪಿ ಹೋಗುತ್ತಿದ್ದ ಹೊತ್ತಿನಲ್ಲಿ ಗೊ.ರು.ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಿರುವುದು ಸಮಾಧಾನ ತಂದಿದೆ’ ಎಂದರು.
‘ಹಾವೇರಿಯಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆ ಗೊ.ರು.ಚ. ಅವರ ಕನಸಾಗಿತ್ತು. ಜಾನಪದ ವಿಶ್ವವಿದ್ಯಾಲಯ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯಗಳಿಗೆ ಹೊಸ ಚೈತನ್ಯ ನೀಡಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.
‘ಕರ್ನಾಟಕಕ್ಕೆ ತ್ರಿಭಾಷಾ ಸೂತ್ರ ಬೇಡ. ಇದರಿಂದ ಕನ್ನಡ ದುರ್ಬಲಗೊಳ್ಳಲಿದೆ. ದ್ವಿಭಾಷಾ ಸೂತ್ರ ಬೇಕು. ಪ್ರಾಥಮಿಕ ಕ್ಷೇತ್ರದಲ್ಲಿ ಕನ್ನಡ ಕಳೆದುಕೊಂಡರೆ, ಆಡಳಿತದಲ್ಲಿ ಕನ್ನಡ ಉಳಿಯುವುದಿಲ್ಲ. ಇದೇ ಕಾರಣಕ್ಕಾಗಿ ತಮಿಳುನಾಡು ದ್ವಿಭಾಷಾ ಸೂತ್ರ ಒಪ್ಪಿಕೊಂಡಿತು’ ಎಂದರು.
ಇದೇ ವೇಳೆ ನಾಟಕ, ಸಾಹಿತ್ಯ, ಜಾನಪದ ಅಕಾಡೆಮಿಯಿಂದ ಗೊ.ರು.ಚ. ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ರಿಜಿಸ್ಟ್ರಾರ್‌ಗಳಾದ ನಿರ್ಮಲಾ ಮಠಪತಿ, ಕರಿಯಪ್ಪ, ನಮ್ರತಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.