ADVERTISEMENT

‘ಕನ್ನಡ ಸಾಹಿತ್ಯಕ್ಕೆ ಚನ್ನಪ್ಪ ಎರೇಸೀಮೆ ಕೊಡುಗೆ ಅಪಾರ’

ಪಂಡಿತ ಚನ್ನಪ್ಪ ಎರೇಸೀಮೆ ಜನ್ಮಶತಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 20:24 IST
Last Updated 12 ಅಕ್ಟೋಬರ್ 2019, 20:24 IST
ಪಂಡಿತ ಚನ್ನಪ್ಪ ಎರೇಸೀಮೆ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು (ಎಡದಿಂದ) ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಮನು ಬಳಿಗಾರ, ಸಂಶೋಧಕ ಎಂ.ಚಿದಾನಂದಮೂರ್ತಿ, ಶಿವರುದ್ರ ಸ್ವಾಮೀಜಿ ಇದ್ದಾರೆ  –ಪ್ರಜಾವಾಣಿ ಚಿತ್ರ
ಪಂಡಿತ ಚನ್ನಪ್ಪ ಎರೇಸೀಮೆ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು (ಎಡದಿಂದ) ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಮನು ಬಳಿಗಾರ, ಸಂಶೋಧಕ ಎಂ.ಚಿದಾನಂದಮೂರ್ತಿ, ಶಿವರುದ್ರ ಸ್ವಾಮೀಜಿ ಇದ್ದಾರೆ  –ಪ್ರಜಾವಾಣಿ ಚಿತ್ರ   

ಬೆಂಗಳೂರು: ಪಂಡಿತ ಚನ್ನಪ್ಪ ಎರೇಸೀಮೆ ಅವರ ಜನ್ಮಶತಮಾನೋತ್ಸವ ಸಮಾರಂಭ ನಗರದಲ್ಲಿ ಶನಿವಾರ ಜರುಗಿತು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಚನ್ನಪ್ಪ ಅವರ ಕೊಡುಗೆ ಕುರಿತು ಗಣ್ಯರು, ಸ್ವಾಮೀಜಿಗಳು ಮಾತನಾಡಿದರು.

ಸಾಹಿತಿ ಗೊ.ರು. ಚನ್ನಬಸಪ್ಪ, ‘ಚನ್ನಪ್ಪ ಅವರ ಕೃತಿಗಳನ್ನು ಅರ್ಥ ಮಾಡಿಕೊಳ್ಳಲು ಪುರಾಣಗಳನ್ನು ಓದಿರಬೇಕಾಗಿತ್ತು. ಹಳಗನ್ನಡ ಸಾಹಿತ್ಯ, ವ್ಯಾಕರಣ ಶಾಸ್ತ್ರ ಮತ್ತು ಶರಣ ಸಾಹಿತ್ಯದಲ್ಲಿ ಅವರು ವಿಶೇಷ ಪಾಂಡಿತ್ಯ ಪಡೆದಿದ್ದರು’ ಎಂದು ಸ್ಮರಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ, ‘ಮಹಾಕವಿ ಷಡಕ್ಷರಿ ಬರೆದ ಹಳಗನ್ನಡದ ಬಸವರಾಜ ವಿಜಯಂ ಕೃತಿಯ ಗದ್ಯಾನುವಾದವನ್ನು ಚನ್ನಪ್ಪ ಮಾಡಿದ್ದಾರೆ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಬಸವಣ್ಣನವರು ಮತ್ತು ಇತರ ಶಿವಶರಣರ ಬಗ್ಗೆ ಈ ಕೃತಿಯಲ್ಲಿ ಬರೆಯಲಾಗಿದೆ’ ಎಂದರು.

ADVERTISEMENT

‘ಪರಿಷತ್‌ ವತಿಯಿಂದಲೇ ಚನ್ನಪ್ಪ ಎರೇಸೀಮೆ ಅವರ ಜನ್ಮಶತಮಾನೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ಮುಂದಿನ 3–4 ತಿಂಗಳಲ್ಲಿ ಪರಿಷತ್‌ ಆವರಣದಲ್ಲಿಯೇ ಸಮಾರಂಭ ಹಮ್ಮಿಕೊಳ್ಳಲಾಗುವುದು’ ಎಂದರು.

ಬೇಲಿಮಠದ ಶಿವರುದ್ರ ಸ್ವಾಮೀಜಿ, ‘ಪ್ರಾಚೀನ ಕಾವ್ಯಗಳಿಂದ ಆಧುನಿಕ ಗದ್ಯದವರೆಗೆ ಚನ್ನಪ್ಪ ಸಾಹಿತ್ಯ ಕೃಷಿ ಮಾಡಿದ್ದಾರೆ. ಬಸವರಾಜ ವಿಜಯಂ ಕೃತಿಯನ್ನು ಅನುವಾದ ಮಾಡಲು ಕಸಾಪ ಕೋರಿದಾಗ ದೊಡ್ಡ ಪಂಡಿತರು, ವಿದ್ವಾಂಸರು ಹಿಂಜರಿದರು. ಆದರೆ, ಈ ಕಾರ್ಯವನ್ನು ಚನ್ನಪ್ಪ ಯಶಸ್ವಿಯಾಗಿ ಪೂರೈಸಿದರು’ ಎಂದರು.

ನಿಘಂಟು ತಜ್ಞ ಹೀ.ಚಿ. ಶಾಂತವೀರಯ್ಯನವರಿಗೆ ಪಂಡಿತ ಚನ್ನಪ್ಪ ಎರೇಸೀಮೆ ಸ್ಮರಣಾರ್ಥ ‘ಚನ್ನಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪುರಸ್ಕಾರವು ₹25 ಸಾವಿರ ನಗದು ಒಳಗೊಂಡಿದೆ.

‘ಪಂಡಿತ ಚನ್ನಪ್ಪ ಎರೇಸೀಮೆ ಸಾಹಿತ್ಯ ಸಂಚಯ’ ವೆಬ್‌ಸೈಟ್‌ ಅನಾವರಣಗೊಳಿಸಲಾಯಿತು.

*
ಎರೇಸೀಮೆ ಚನ್ನಪ್ಪ ಪಂಡಿತ ಎಂಬ ಪದಕ್ಕೆ ಗಂಭೀರತೆ ತಂದುಕೊಟ್ಟಿದ್ದರು. ಕವಿಹೃದಯ ಹೊಂದಿದ್ದ ಅವರು ದೊಡ್ಡ ಸಂಶೋಧಕರಾಗಿದ್ದರು.
-ಎಂ. ಚಿದಾನಂದ ಮೂರ್ತಿ, ಹಿರಿಯ ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.