ADVERTISEMENT

ಕನ್ನಡ ಸಾಹಿತ್ಯ ಪ‍ರಿಷತ್ತಿನ ಸಾಂಪ್ರದಾಯಿಕ ‘ಮಂದಿರ’ಕ್ಕೆ ಆಧುನಿಕ ಸ್ಪರ್ಶ

ಕನ್ನಡ ಸಾಹಿತ್ಯ ಪರಿಷತ್ತಿನಿಂದ ₹1.95 ಕೋಟಿ ವೆಚ್ಚದಲ್ಲಿ ಕಟ್ಟಡ ನವೀಕರಣ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 19:46 IST
Last Updated 24 ಆಗಸ್ಟ್ 2022, 19:46 IST
ಕೃಷ್ಣರಾಜ ಪರಿಷನ್ಮಂದಿರದ ನವೀಕೃತ ಸಭಾಂಗಣದಲ್ಲಿ ಸ್ಥಿರಾಸನಗಳನ್ನು ಅಳವಡಿಸುತ್ತಿರುವುದು – ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ.
ಕೃಷ್ಣರಾಜ ಪರಿಷನ್ಮಂದಿರದ ನವೀಕೃತ ಸಭಾಂಗಣದಲ್ಲಿ ಸ್ಥಿರಾಸನಗಳನ್ನು ಅಳವಡಿಸುತ್ತಿರುವುದು – ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಒಂಬತ್ತು ದಶಕಗಳಿಂದ ವಿವಿಧ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸಿದ್ದ ಕನ್ನಡ ಸಾಹಿತ್ಯ ಪ‍ರಿಷತ್ತಿನಶ್ರೀ ಕೃಷ್ಣರಾಜ ಪರಿಷನ್ಮಂದಿರವುಸಾಂಪ್ರದಾಯಿಕತೆ ಉಳಿಸಿಕೊಂಡೇ ಆಧುನಿಕ ಸ್ಪರ್ಶಕ್ಕೆ ತೆರೆದುಕೊಂಡಿದೆ.

ನೆಲಹಾಸು, ಧ್ವನಿ–ಬೆಳಕಿನ ವ್ಯವಸ್ಥೆ, ಆಸನಗಳು,ಹವಾನಿಯಂತ್ರಿತ ವ್ಯವಸ್ಥೆ ಸೇರಿ ಸಭಾಂಗಣದಲ್ಲಿ ಎಲ್ಲವನ್ನೂ ಹೊಸದಾಗಿ ಅಳವಡಿಸಲಾಗಿದೆ.

ಸಭಾಂಗಣದ ಗೋಡೆ ಗಳನ್ನು ಪ್ಲೈವುಡ್‌ನಿಂದ ಅಂದಗೊಳಿಸಲಾಗಿದೆ. ಐದು ತಿಂಗಳಲ್ಲಿ ನವೀಕರಣ ಕಾರ್ಯ ನಡೆಸಲಾಗಿದ್ದು, ಈಗ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.
ಹೊ‌ರಾಂಗಣದ ಬಣ್ಣವೂ ಬದಲಾಗಿದ್ದು, ಈ ಮೊದ ಲಿನ ಹಳದಿ ಬಣ್ಣದ ಬದಲು ಪಾರಂ ಪರಿಕ ಕಟ್ಟಡಗಳಂತೆ ಕೆಂಪು ಬಣ್ಣ ಬಳಿಯಲಾಗಿದೆ. ₹ 1.95 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ.

ADVERTISEMENT

ಪರಿಷತ್ತಿನಲ್ಲಿ ಮೂರು ಸಭಾಂಗಣಗಳಿದ್ದು, ಶ್ರೀ ಕೃಷ್ಣರಾಜ ಪರಿಷನ್ಮಂದಿರವು ನಗರದ ಅತ್ಯಂತ ಹಳೆಯ ಸಭಾಂಗಣಗಳಲ್ಲಿ ಒಂದಾಗಿದೆ. ಇದು 1938ರಿಂದ ಕಾರ್ಯನಿರ್ವಹಿಸುತ್ತಿದೆ. ಕಾಲ ಕಾಲಕ್ಕೆ ಈ ಸಭಾಂಗಣವನ್ನು ನವೀಕರಣ ಮಾಡುತ್ತಾ ಬರಲಾಗಿತ್ತು. ಹತ್ತು ವರ್ಷಗಳ ಹಿಂದೆ ಪ್ಲೈವುಡ್‌ನಿಂದ ಸಭಾಂಗಣದ ಗೋಡೆಗಳನ್ನು ಅಂದಗೊಳಿಸಲಾಗಿತ್ತು.

ಸೀಲಿಂಗ್‌ ಅನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಬಳಸಿ ಅಂದಗೊಳಿಸಲಾಗಿತ್ತು. ಆದರೆ, ಸಭಾಂಗಣದ ಪ್ಲೈವುಡ್‌ಗಳು ಹಾಳಾಗಿ, ಕೆಲವೆಡೆ ಕಿತ್ತು ಹೋಗಿತ್ತು.

128 ಸ್ಥಿರಾಸನ: ವೇದಿಕೆಯ ನೆಲ ಹಾಸು ಕೂಡ ಹಾಳಾಗಿತ್ತು. ಸಭಾಂಗಣದಲ್ಲಿ ಜೋಡಿಸಿದ ಸ್ಥಿರ ಆಸನಗಳು ಇಲ್ಲದಿರುವುದ ರಿಂದ ಪ್ರೇಕ್ಷಕರ ಸಂಖ್ಯೆಗೆ ಅನುಗುಣ ವಾಗಿ160ರಿಂದ 180 ಆಸನಗಳನ್ನು ಅಳವಡಿಸಲಾಗುತ್ತಿತ್ತು. ಈಗ128 ಸ್ಥಿರಾಸನಗಳು ಸಭಾಂಗಣದಲ್ಲಿ ಇರಲಿದ್ದು, ಹೆಚ್ಚುವರಿಯಾಗಿ ಆಸನ ಇರಿಸಲು ಅವಕಾಶವಿದೆ.

ನವೀಕರಣದ ವೆಚ್ಚವನ್ನು ಪರಿ ಷತ್ತು,ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಹಾಗೂ ಸರ್ಕಾರ ದಿಂದಲೂ ಪಡೆಯಲು ನಿರ್ಧರಿಸಿದೆ.

ಸಭಾಂಗಣದ ಮುಂಭಾಗ ಇಂಟರ್‌ ಲಾಕ್‌ ಟೈಲ್ಸ್‌,ಪರಿಷತ್ತಿನ ವಜ್ರಮಹೋತ್ಸವ ಕಟ್ಟಡಕ್ಕೆ ಹೊಸದಾಗಿ ಲಿಫ್ಟ್ ಅಳವಡಿಸಲಾಗಿದೆ. ಕುವೆಂಪು ಅವರು ರಚಿಸಿದ ‘ಎಲ್ಲಾದರೂ ಇರು ಎಂತಾದರು ಇರು...’ ಗೀತೆಯುಲಿಫ್ಟ್‌ ಪ್ರವೇಶಿಸಿದ ಬಳಿಕ ಕೇಳಿಸಲಿದೆ.

‘ಶ್ರೀ ಕೃಷ್ಣರಾಜ ಪರಿಷನ್ಮಂದಿರದ ಸಾಂಪ್ರದಾಯಿಕತೆ ಉಳಿಸಿಕೊಂಡು ಆಧುನಿಕ ಸ್ಪರ್ಶ ನೀಡಲಾಗಿದೆ. ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ನವೀಕರಣ ಮಾಡಲಾಗಿದೆ. ನಿನ್ನೆ ಮತ್ತು ನಾಳೆಗಳ ನಡುವಿನ ಸೇತುವೆಯಂತಿರುವ ಕಟ್ಟಡ, ಬೆಂಗಳೂರಿನ ಪ್ರಮುಖ ಸಾಂಸ್ಕೃತಿಕ ಹೆಗ್ಗುರುತು ಎಂಬಂತೆ ರೂಪುಗೊಂಡಿದೆ’ ಎಂದು ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.

ಸಭಾಂಗಣದ ಬಾಡಿಗೆ ಹೆಚ್ಚಳ

ಕೃಷ್ಣರಾಜ ಪರಿಷನ್ಮಂದಿರದ ಸಭಾಂಗಣಕ್ಕೆ ದಿನವೊಂದಕ್ಕೆ ₹ 5 ಸಾವಿರ, ಅರ್ಧ ದಿನಕ್ಕೆ ₹ 3 ಸಾವಿರ ಬಾಡಿಗೆಯನ್ನು ಈ ಹಿಂದೆ ಪರಿಷತ್ತು ನಿಗದಿ ಮಾಡಿತ್ತು. ₹ 2 ಸಾವಿರ ಠೇವಣಿ ಕಟ್ಟಬೇಕಿತ್ತು. ಈಗ ಹವಾನಿಯಂತ್ರಿತ ವ್ಯವಸ್ಥೆ ಅಳವಡಿಸಿ, ನವೀಕರಣ ಮಾಡಿರುವುದರಿಂದ ಬಾಡಿಗೆ ಮೊತ್ತ ಹೆಚ್ಚಳಕ್ಕೆ ಪರಿಷತ್ತು ನಿರ್ಧರಿಸಿದೆ. ಆದರೆ, ಎಷ್ಟು ಪ್ರಮಾಣ ಎನ್ನುವುದು ಇನ್ನೂ ಅಂತಿಮವಾಗಿಲ್ಲ.

‘ಬಾಡಿಗೆ ನಿಗದಿಗೆ ಸಂಬಂಧಿಸಿದಂತೆ ಸಮಿತಿ ರಚಿಸಲಾಗುತ್ತದೆ. ಆ ಸಮಿತಿಯು ನಗರದಲ್ಲಿರುವ ವಿವಿಧ ಸಭಾಂಗಣಗಳ ಬಾಡಿಗೆ ಬಗ್ಗೆಯೂ ಚರ್ಚಿಸಿ, ದರ ನಿಗದಿ ಮಾಡುತ್ತದೆ’ ಎಂದು ಮಹೇಶ ಜೋಶಿ ತಿಳಿಸಿದರು.

ಕಟ್ಟಡ ನಾಳೆ ಉದ್ಘಾಟನೆ

ಶ್ರೀ ಕೃಷ್ಣರಾಜ ಪರಿಷನ್ಮಂದಿರದ ನವೀಕೃತ ಕಟ್ಟಡ ಶುಕ್ರವಾರ ಸಂಜೆ 5 ಗಂಟೆಗೆ ಉದ್ಘಾಟನೆ ಯಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.

ವಿಶೇಷ ಅತಿಥಿಗಳಾಗಿ ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಕಮಲಾ ಹಂಪನಾ ಹಾಗೂ ದೊಡ್ಡರಂಗೇಗೌಡ ಭಾಗವಹಿಸಲಿದ್ದಾರೆ.

ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿರುವ ಪರಿಷತ್ತಿನ ಪುರಾತನ ಕಟ್ಟಡಗಳು ಹೊಸ ರೂಪ ಪಡೆದುಕೊಂಡಿವೆ. ಕೆಲವೇ ದಿನಗಳಲ್ಲಿ ಸಾರ್ವಜನಿಕರಿಗೆ ಬಾಡಿಗೆಗೆ ನೀಡಲಾಗುವುದು.

–ಮಹೇಶ ಜೋಶಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.