ADVERTISEMENT

‘ಕನ್ನಡಿಗರಿಗೆ ಬೇಕು ಪಡೆಯುವ ಮನೋಭಾವ’

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 20:30 IST
Last Updated 9 ನವೆಂಬರ್ 2018, 20:30 IST
ಪ್ರೊ.ಹಂಪ ನಾಗರಾಜಯ್ಯ ಅವರು ಪುಸ್ತಕಗಳನ್ನು ಬಿಡುಗಡೆ ಮಾಡಿ ಪ್ರತಿಯೊಂದನ್ನು ಅಕಾಡೆಮಿ ಅಧ್ಯಕ್ಷೆ ಪ್ರೊ.ಎಂ.ಜೆ.ಕಮಲಾಕ್ಷಿ ಅವರಿಗೆ ನೀಡಿದರು.ಕಲಾವಿದರಾದ ಸಿ.ಚಂದ್ರಶೇಖರ್‌, ಎಂ.ಎಚ್‌.ಕೃಷ್ಣಯ್ಯ ಇದ್ದರು –ಪ್ರಜಾವಾಣಿ ಚಿತ್ರ
ಪ್ರೊ.ಹಂಪ ನಾಗರಾಜಯ್ಯ ಅವರು ಪುಸ್ತಕಗಳನ್ನು ಬಿಡುಗಡೆ ಮಾಡಿ ಪ್ರತಿಯೊಂದನ್ನು ಅಕಾಡೆಮಿ ಅಧ್ಯಕ್ಷೆ ಪ್ರೊ.ಎಂ.ಜೆ.ಕಮಲಾಕ್ಷಿ ಅವರಿಗೆ ನೀಡಿದರು.ಕಲಾವಿದರಾದ ಸಿ.ಚಂದ್ರಶೇಖರ್‌, ಎಂ.ಎಚ್‌.ಕೃಷ್ಣಯ್ಯ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕನ್ನಡಿಗರು ಕೊಡುವುದರಲ್ಲಿ ನಿಸ್ಸೀಮರು, ಈಗ ಬೇರೆ ಪ್ರದೇಶಗಳ ಸಂಸ್ಕೃತಿಗಳಿಂದಲೂ ಪಡೆಯುವ ಮನೋಭಾವವನ್ನು ರೂಢಿಸಿಕೊಳ್ಳಬೇಕು’ ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟರು.

ಕರ್ನಾಟಕ ಲಲಿತಕಲಾ ಅಕಾಡೆಮಿಯು ಪ್ರಕಟಿಸಿರುವ ನಾಲ್ಕು ಪುಸ್ತಕಗಳ ಬಿಡುಗಡೆ ಮತ್ತು 2018ರ ಗೌರವ ಫೆಲೋಶಿಪ್‌ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಲಾ ವಿಮರ್ಶಕಿ ಮಾರ್ಥ ಯಾಕಿಮೋವಿಝ್ ಅವರ ಕುರಿತು ಮಾತನಾಡಿದ ಅವರು, ‘ಮಾರ್ಥ ಅವರು ವಿದೇಶಿಗರಾದರೂ ರಾಜ್ಯದಲ್ಲಿ ನೆಲೆಸಿ, ಕನ್ನಡದಲ್ಲಿ ಬೆರೆತರು. ಇಲ್ಲಿನ ಕಲಾ ಸಂಸ್ಕೃತಿಯನ್ನು ಅರಿತುಕೊಂಡರು. ನಾವು ಸಹ ಅನ್ಯ ಪ್ರದೇಶಗಳಲ್ಲಿನ ಉತ್ತಮ ಜ್ಞಾನ, ಸಂಸ್ಕೃತಿಯನ್ನು ಸ್ವಾಗತಿಸಬೇಕು’ ಎಂದರು.

ADVERTISEMENT

ಕಲಾಲೋಕಕ್ಕೆ ಕೊಡುಗೆ ನೀಡಿರುವ ಆರ್‌.ಜಿ.ರಾಯಕರ, ಪ್ರೊ.ಎಂ.ಎಸ್‌.ನಂಜುಂಡರಾವ್‌, ಜಿ.ಎಲ್‌.ಎನ್‌.ಸಿಂಹ, ಮಾರ್ಥ ಯಾಕಿಮೋವಿಝ್‌ ಕುರಿತ ಪುಸ್ತಕಗಳನ್ನು ಅಕಾಡೆಮಿ ಪ್ರಕಟಿಸಿದೆ. ಇವುಗಳಲ್ಲಿ ಅವರ ಕಲಾಕೃಷಿಯ ಪರಿಚಯ ಮತ್ತು ಅಪರೂಪದ ಕಲಾಕೃತಿಗಳ ಛಾಯಾಚಿತ್ರಗಳಿವೆ.

‘ನಂಜುಂಡರಾವ್‌ ಅವರು ಸ್ಪರ್ಧೆಗೆ ನಿಂತವರಂತೆಸರ್ಕಾರದಿಂದ ಅನುದಾನ ತಂದು ಚಿತ್ರಕಲಾ ಪರಿಷತ್ತನ್ನು ಕಟ್ಟಿದರು. ಜಿ.ಎಲ್‌.ಎನ್‌.ಸಿಂಹ ರಚಿಸಿರುವ ಪೌರಾಣಿಕ ಪಾತ್ರಗಳ ಚಿತ್ರಗಳು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ’ ಎಂದು ಕಲಾವಿದರ ಕೊಡುಗೆಗಳನ್ನು ಹಂಪನಾ ಸ್ಮರಿಸಿದರು.

ಲೇಖಕ ಪ್ರೊ.ಎಂ.ಎಚ್‌.ಕೃಷ್ಣಯ್ಯ, ‘ಕಲಾಕೃತಿಗಳ ಭಾವ ಅರ್ಥವಾಗಬೇಕು ಅಂದರೆ, ಪ್ರಾದೇಶಿಕ ಸಂಸ್ಕೃತಿಯ ಪರಿಚಯ ಇರಬೇಕು’ ಎಂದರು.

‘ನಂಜುಂಡರಾವ್‌ ಅವರಿಗೆ ಚಿತ್ರಕಲಾ ಕೋಶ ರಚಿಸಬೇಕು ಎಂಬ ಮಹದಾಸೆ ಇತ್ತು. ಅದಕ್ಕಾಗಿ ಸಮಾನಮನಸ್ಕರೊಂದಿಗೆ ತಯಾರಿಗಳನ್ನು ನಡೆಸಿದ್ದರು. ಅವರ ನಿಧನದ ನಂತರ ಆ ಯೋಜನೆ ಮುಂದುವರಿಯಲಿಲ್ಲ’ ಎಂದು ಬೇಸರಿಸಿದರು.

ಕಲಾವಿದರಾದ ಡಾ.ಜೆ.ಎಸ್‌.ಖಂಡೇರಾವ್‌ ಮತ್ತು ಜಿ.ಎಲ್‌.ಎನ್‌.ಸಿಂಹ ಅವರಿಗೆ ಫೆಲೋಶಿಪ್‌ ನೀಡಿ ಪುರಸ್ಕರಿಸಲಾಯಿತು. ಫೆಲೋಶಿಪ್‌ ತಲಾ ₹2 ಲಕ್ಷ ಒಳಗೊಂಡಿದೆ. ಆಯ್ಕೆಯಾದ ಕಲಾವಿದರು ಅಕಾಡೆಮಿಗೆ ತಲಾ 2 ಕಲಾಕೃತಿಗಳನ್ನು ರಚಿಸಿ ಕೊಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.