ADVERTISEMENT

‘ಗೊಂದಲದಲ್ಲಿ ಕಪಾಲ ಬೆಟ್ಟ’

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 19:58 IST
Last Updated 7 ಜನವರಿ 2020, 19:58 IST

ಬೆಂಗಳೂರು: ಕನಕ‍ಪುರ ತಾಲ್ಲೂಕಿನ ಕಪಾಲ ಬೆಟ್ಟದಲ್ಲಿ ಯಾವ ದೇವರಿನ ನೆಲೆಯಾಗಿತ್ತು ಎಂಬುದು ಮೊದಲು ನಿರ್ಧಾರವಾಗಬೇಕಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಮಂಗಳವಾರ ಹೇಳಿದರು.

ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ವಿವಾದದ ಹಿನ್ನೆಲೆಯಲ್ಲಿ ಸಚಿವರು ಈ ಸ್ಪಷ್ಟನೆ ನೀಡಿದ್ದು, ‘ಬೆಟ್ಟದಲ್ಲಿ ಯೇಸು, ಈಶ್ವರ, ಕಾಲಭೈರವೇಶ್ವರ ದೇವರು ನೆಲೆಸಿದ್ದರು ಎಂಬ ಗೊಂದಲ ಉಂಟಾಗಿದೆ. ಬೆಟ್ಟ ಯಾವ ಸಮುದಾಯಕ್ಕೆ ಸೇರಬೇಕು ಎಂಬುದುಮೊದಲು ನಿರ್ಧಾರವಾಗಬೇಕಿದೆ’ ಎಂದರು.

‘ಈ ಸಂಬಂಧ ಅಧಿಕಾರಿಗಳಿಗೆ ವರದಿ ನೀಡಲು ಸೂಚಿಸಲಾಗಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು. ಈ ವಿವಾದಕ್ಕೂ ಕನಕಪುರ ತಹಶೀಲ್ದಾರ್ ವರ್ಗಾವಣೆಗೂ ಸಂಬಂಧವಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

13ಕ್ಕೆ ಕನಕಪುರ ಚಲೋ ರ್‍ಯಾಲಿ

‘ಕನಕಪುರದ ಕಪಾಲಬೆಟ್ಟ ಮುನೇಶ್ವರ ಸ್ವಾಮಿ ಕ್ಷೇತ್ರದ ಉಳಿವಿಗಾಗಿಹಿಂದೂ ಜಾಗರಣ ವೇದಿಕೆ ವತಿಯಿಂದ ಇದೇ 13 ರಂದು ಬೆಳಿಗ್ಗೆ 11 ಗಂಟೆಗೆ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೆ ಕನಕಪುರ ಚಲೋ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ’ ಎಂದು ವೇದಿಕೆಯ ಪ್ರಾಂತ ಕಾರ್ಯದರ್ಶಿ ದೋ.ಕೇಶವಮೂರ್ತಿ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಪಾಲ ಬೆಟ್ಟ ಎಂದು ಗುರುತಿಸಲಾಗುತ್ತಿರುವ ಬೆಟ್ಟ ಮೂಲದಲ್ಲಿ ಮುನೇಶ್ವರ ಸ್ವಾಮಿಯ ಬೆಟ್ಟ ಆಗಿತ್ತು. ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರು ಅನಾದಿ ಕಾಲದಿಂದಲೂ ಮುನೇಶ್ವರ ಸ್ವಾಮಿ ಸೇವೆ ಮಾಡುತ್ತಿದ್ದಾರೆ. ಆದರೆ, ಇಲ್ಲಿ ಸಂಪೂರ್ಣ ಕ್ರೈಸ್ತೀಕರಣ ಮಾಡಲು ಕೆಲವರು ಮುಂದಾಗಿದ್ದಾರೆ’ ಎಂದು ದೂರಿದರು.

‘ರಾಮನಗರ ಜಿಲ್ಲೆಯಲ್ಲಿ ಮತಾಂತರವ್ಯಾಪಕವಾಗಿ ನಡೆಯುತ್ತಿದೆ. ಕ್ರೈಸ್ತ ಮಿಷನರಿಗಳಿಂದ ಮತಾಂತರ ಪ್ರಕ್ರಿಯೆ ತೆರೆಮರೆಯಲ್ಲಿ ನಡೆಯುತ್ತಿದೆ. ಈ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣವಾದರೆ ಮತಾಂತರಕ್ಕೆ ಅಧಿಕೃತ ಪರವಾನಗಿ ನೀಡಿದಂತಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.