ADVERTISEMENT

ಉದ್ಧವ್ ಠಾಕ್ರೆಗೆ ಗಡಿ ಹೋರಾಟ ಸಮಿತಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 18:27 IST
Last Updated 20 ಜನವರಿ 2021, 18:27 IST

ಬೆಂಗಳೂರು: ‘ಕರ್ನಾಟಕ ಆಕ್ರಮಿತ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುತ್ತೇನೆ ಎಂದಿರುವ ಅಲ್ಲಿನ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಕನ್ನಡಿಗರು ತಕ್ಕ ಪಾಠ ಕಲಿಸಬೇಕಾದೀತು’ ಎಂದು ಕರ್ನಾಟಕ ಗಡಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

‘ಹುತಾತ್ಮರ ದಿನಾಚರಣೆ ನೆಪದಲ್ಲಿ ಕನ್ನಡಿಗರು ಮತ್ತು ಮರಾಠರ ನಡುವೆ ಕಿಚ್ಚು ಹಚ್ಚುವ ಕೆಲಸವನ್ನು ಉದ್ಧವ್ ಠಾಕ್ರೆ ಮಾಡಿದ್ದಾರೆ. ಈ ರೀತಿ ಕನ್ನಡಿಗರನ್ನು ಕೆಣಕುವ ಕೆಲಸವನ್ನು ಅವರ ತಂದೆ ಬಾಳಾ ಠಾಕ್ರೆ ಕಾಲದಿಂದಲೂ ಶಿವಸೇನೆ ಮಾಡಿಕೊಂಡು ಬಂದಿದೆ’ ಎಂದು ಸಮಿತಿಯ ಅಧ್ಯಕ್ಷ ಪ್ರೊ. ಬಿ.ಕೆ.ಆರ್. ರಾವ್ ಬೈಂದೂರು ಹಾಗೂ ಪದಾಧಿಕಾರಿಗಳುಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮಹಾಜನ ಆಯೋಗಕ್ಕೂ ಮುನ್ನ ಫಜಲ್ ಆಲಿ ಆಯೋಗ ನೀಡಿದ್ದ ವರದಿಯಲ್ಲಿ ಲಾತೂರು, ಕೊಲ್ಲಾಪುರ, ಸೊಲ್ಲಾಪುರ, ಚಂದಗಡ, ಈಚಲಕರಂಜಿ, ಪಂಡರಾಪುರ ಕೂಡ ಕರ್ನಾಟಕಕ್ಕೆ ಸೇರಬೇಕು ಎಂದು ತಿಳಿಸಲಾಗಿತ್ತು. ಲೋಕಸಭೆಯಲ್ಲಿ ಈ ವರದಿ ಮಂಡನೆಯಾಗಿತ್ತು. ಮಹಾರಾಷ್ಟ್ರದ ಸದಸ್ಯರು ಗದ್ಧಲ ಎಬ್ಬಿಸಿದ್ದರಿಂದ ಮಹಾಜನ್ ಆಯೋಗ ಅಸ್ಥಿತ್ವಕ್ಕೆ ಬಂತು. ಮಹಾಜನ್ ಆಯೋಗದ ಮೂಲಕ ಕೆಲ ಪ್ರದೇಶಗಳನ್ನು ಮಹಾರಾಷ್ಟ್ರದಲ್ಲೇ ಉಳಿಸಿಕೊಳ್ಳಲಾಗಿದೆ. ಆದರೂ, ಮತ್ತೆ ಕನ್ನಡಿಗರನ್ನು ಕೆಣಕುವ ಪ್ರಯತ್ನವನ್ನು ಮಹಾರಾಷ್ಟ್ರ ಮಾಡುತ್ತಿದೆ’ ಎಂದು ಅವರು ದೂರಿದ್ದಾರೆ.

ADVERTISEMENT

‘ಗೋಕಾಕ್ ಚಳವಳಿ ಮೂಲಕ ಮಹಾರಾಷ್ಟ್ರವನ್ನು ಕನ್ನಡಿಗರು ಹಿಮ್ಮೆಟ್ಟಿಸಿದ್ದಾರೆ. ಕಿಡಿಗೇಡಿತನ ಮುಂದುವರಿಸಿದರೆ ಕನ್ನಡಿಗರ ಮಾನ, ಪ್ರಾಣ ರಕ್ಷಣೆಗೆ ಸಮಿತಿ ಹೋರಾಟ ರೂಪಿಸಲಿದೆ’ ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.