ADVERTISEMENT

ವಿದೇಶಿಯರ ಮಕ್ಕಳಿಗೆ ಆಶ್ರಯ: ಸಂಪೂರ್ಣ ಮಾಹಿತಿ ನೀಡಲು ಹೈಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 19:56 IST
Last Updated 4 ಡಿಸೆಂಬರ್ 2019, 19:56 IST
   

ಬೆಂಗಳೂರು: ‘ಅಕ್ರಮ ವಾಸದ ಆರೋಪದಡಿ ಬಂಧನಕ್ಕೆ ಒಳಗಾದ ವಿದೇಶಿಯರ ಮಕ್ಕಳಿಗೆ ಸೂಕ್ತ ಆಶ್ರಯ ಕಲ್ಪಿಸುವ ದಿಸೆಯಲ್ಲಿ ಭಾರತ ಅನುಸರಿಸುತ್ತಿರುವ ನಿಯಮಗಳ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಿ’ ಎಂದು ಜಾಮೀನು ಕೋರಿದ ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್ ಮೌಖಿಕ ನಿರ್ದೇಶನ ನೀಡಿದೆ.

ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಬಾಂಗ್ಲಾ ದೇಶದ ಬಾಬುಲ್ ಖಾನ್, ತಾನಿಯಾ ಹಾಗೂ ಮೊಹಮ್ಮದ್ ಆರೀಫ್ ಸೇರಿದಂತೆ 10ಕ್ಕೂ ಹೆಚ್ಚು ಜನರ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರ ಮೊಹಮ್ಮದ್ ಆರೀಫ್ ಪರ ವಕೀಲರು ವಾದ ಮಂಡಿಸಿ, ‘ಅರ್ಜಿದಾರರಿಗೆ ಮೂವರು ಮಕ್ಕಳು ಇದ್ದಾರೆ. ನಾಲ್ಕು ವರ್ಷದ ಮಗು ತಾಯಿಯೊಂದಿಗೆ ಕಾರಾಗೃಹದಲ್ಲಿ ವಾಸ ಮಾಡುತ್ತಿದೆ. ಇನ್ನಿಬ್ಬರು ಮಕ್ಕಳನ್ನು ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಇರಿಸಲಾಗಿದೆ. ಹೀಗಾಗಿ, ವಿದೇಶಿಯರ ಬಂಧನದ ಬಳಿಕ ಅವರ ಮಕ್ಕಳಿಗೆ ಸೂಕ್ತ ಆಶ್ರಯ ಕಲ್ಪಿಸಬೇಕಿದೆ’ ಎಂದು ನ್ಯಾಯಪೀಠದ ಗಮನ ಸೆಳೆದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಕೇಂದ್ರ ಸರ್ಕಾರ ಯುನೆಸ್ಕೊ ಒಪ್ಪಂದಂತೆ ಬಾಲನ್ಯಾಯ ಕಾಯ್ದೆ ಜಾರಿಗೊಳಿಸಿದೆ. ಈ ಕಾಯ್ದೆಯಲ್ಲಿ ಇರಬಹುದಾದ ವಿದೇಶಿ ಪ್ರಜೆಗಳ ಮಕ್ಕಳ ಆಶ್ರಯ ಕುರಿತಾದ ನಿರ್ದಿಷ್ಟ ನಿಯಮ ಅಥವಾ ಮಾರ್ಗಸೂಚಿಗಳ ಬಗೆಗಿನ ವಿಸ್ತೃತ ವಿವರಗಳ ಅಗತ್ಯವಿದೆ. ಈ ಕುರಿತಂತೆ ಕೇಂದ್ರ–ರಾಜ್ಯ ಸರ್ಕಾರ ಮತ್ತು ಅರ್ಜಿದಾರರ ಪರ ವಕೀಲರು ಮುಂದಿನ ವಿಚಾರಣೆ ವೇಳೆ ಹೆಚ್ಚಿನ ಬೆಳಕು ಚೆಲ್ಲಿ’ ಎಂದು ನಿರ್ದೇಶಿಸಿತು.

ವಿಚಾರಣೆಯನ್ನು ಇದೇ 11ಕ್ಕೆ ಮುಂದೂಡಿದ್ದು ಅಂದು ಜಾಮೀನು ಕುರಿತ ಆದೇಶ ಪ್ರಕಟಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.