ADVERTISEMENT

ನವ ಬೆಂಗಳೂರು ಯೋಜನೆ ಅರ್ಜಿ: ಸರ್ಕಾರದ ಸಮರ್ಥನೆಗೆ ಹೈಕೋರ್ಟ್‌ ಕಿಡಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 19:42 IST
Last Updated 7 ಫೆಬ್ರುವರಿ 2020, 19:42 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಸಂವಿಧಾನದ 166ನೇ ವಿಧಿಯಡಿ ರಾಜ್ಯಪಾಲರ ಆದೇಶಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಸರ್ಕಾರಿ ಆದೇಶಕ್ಕೆ ಸಂಪುಟ ದರ್ಜೆ ಸಚಿವರೊಬ್ಬರು ತಡೆ ನೀಡುವ ಅಧಿಕಾರ ಯಾವ ಕಾನೂನಿನ ವ್ಯಾಪ್ತಿಯಲ್ಲಿದೆ’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದೆ.

‘ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆ’ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಸೂಚಿಸಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಯಾವ ಕಾನೂನಿನ ವ್ಯಾಪ್ತಿಯಲ್ಲಿ ಟಿಪ್ಪಣಿ ಬರೆದಿದ್ದಾರೆ’ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರು, ಸರ್ಕಾರದ ನಿಲುವನ್ನು ಬಲವಾಗಿ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ‘ಅರ್ಜಿದಾರರಿಗೆ ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಏನಿದೆ ಎಂಬುದೇ ಆಶ್ಚರ್ಯಕರವಾಗಿದೆ’ ಎಂದರು.

ADVERTISEMENT

ಇದಕ್ಕೆ ನ್ಯಾಯಪೀಠ, ‘ಹಾಗಾದರೆ ಹೈಕೋರ್ಟೇ ಇದನ್ನು ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ದಾಖಲಿಸಿಕೊಳ್ಳುತ್ತದೆ ಬಿಡಿ. ಆದರೆ, ಅರ್ಜಿದಾರರು ಹೇಳುತ್ತಿರುವುದರಲ್ಲಿ ಕಾನೂನಾತ್ಮಕ ಅಂಶ ಅಡಕವಾಗಿದೆ’ ಎಂದು ಹೇಳಿತು.

ಅರ್ಜಿದಾರರ ಪರ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ, ‘ಮುಖ್ಯಮಂತ್ರಿಗಳ ಟಿಪ್ಪಣಿ ಕಾನೂನು ಬಾಹಿರವಾಗಿದೆ ಎಂಬುದಷ್ಟೇ ನಮ್ಮ ಕಾಳಜಿ. ಹೈಕೋರ್ಟ್‌ ಇದನ್ನು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ದಾಖಲಿಸಿಕೊಂಡರೆ ಸಂತೋಷ’ ಎಂದರು.

‘ಮುಂದಿನ ವಿಚಾರಣೆ ವೇಳೆಗೆ ಈ ಕುರಿತ ಸ್ಪಷ್ಟ ಮತ್ತು ನಿಖರವಾದ ಕಾನೂನಾತ್ಮಕ ಉಲ್ಲೇಖಗಳನ್ನು ನ್ಯಾಯಪೀಠಕ್ಕೆ ಒದಗಿಸಿ’ ಎಂದು ಸರ್ಕಾರಕ್ಕೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಾರ್ಚ್‌ 16ಕ್ಕೆ ಮುಂದೂಡಿದೆ.

ಏನಿದು ಅರ್ಜಿ?: ಈ ಹಿಂದಿನ ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಮಹತ್ವಾಕಾಂಕ್ಷೆಯ ‘ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆ’ಯನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ರದ್ದುಗೊಳಿಸಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

ಮಧ್ಯಂತರ ಮನವಿ ಏನು?: ‘ಸರ್ಕಾರದ ಆದೇಶ ಮುಖ್ಯಮಂತ್ರಿಗಳ ಟಿಪ್ಪಣಿ ಆಧರಿಸಿದೆ. ಟಿಪ್ಪಣಿಯು ಕಾನೂನು ಬಾಹಿರ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಆದ್ದರಿಂದ ಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರ 2019ರ ಫೆಬ್ರುವರಿ 1ರಲ್ಲಿ ನೀಡಿರುವ ಆದೇಶದ ಅನುಸಾರ ಕಾಮಗಾರಿ ಮುಂದುವರಿಸಲು ನಿರ್ದೇಶಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೆ 2019ರ ಸರ್ಕಾರದ ಆದೇಶದಲ್ಲಿ ಯಾವುದೇ ಬದಲಾವಣೆ, ಸ್ವರೂಪ ಮಾರ್ಪಾಡು ಅಥವಾ ರದ್ದುಗೊಳಿಸುವುದು ಇಲ್ಲವೇ ಕಾಮಗಾರಿಯಲ್ಲಿ ಮಧ್ಯಪ್ರವೇಶಿಸದಂತೆ ನಿರ್ದೇಶಿಸಬೇಕು’ ಎಂಬುದು ಅರ್ಜಿದಾರರ ಮಧ್ಯಂತರ ಕೋರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.