ADVERTISEMENT

ಮಳೆಗಾಲ: ಮುನ್ನೆಚ್ಚರಿಕೆ ವಹಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಮೇ 2025, 15:59 IST
Last Updated 5 ಮೇ 2025, 15:59 IST
ಮಳೆಗಾಲ ಕಾಲಿಡುತ್ತಿದೆ, ಜಾಗೃತರಾಗಿ...
ಮಳೆಗಾಲ ಕಾಲಿಡುತ್ತಿದೆ, ಜಾಗೃತರಾಗಿ...   

ಬೆಂಗಳೂರು: ನಗರದಲ್ಲಿ ಮಳೆಗಾಲದ ವೇಳೆಗೆ ಸನ್ನದ್ಧರಾಗಿರಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮುಂಗಾರು ಮಳೆ ಆರಂಭ ಸನಿಹವಾಗುತ್ತಿದ್ದು, ನಗರದಲ್ಲಿ ಸಂಭವನೀಯ ಪ್ರವಾಹ, ಮಳೆ ಅನಾಹುತಗಳನ್ನು ತಡೆಗಟ್ಟಲು ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ಅವರು ಸೋಮವಾರ ಸಭೆ ನಡೆಸಿದರು.

ನಗರದಲ್ಲಿ 209 ಪ್ರವಾಹಪೀಡಿತ ಪ್ರದೇಶಗಳಿದ್ದು, ಈಗಾಗಲೇ 166 ಸ್ಥಳಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. 43 ಪ್ರವಾಹಪೀಡಿತ ಪ್ರದೇಶಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಕ್ರಮಗಳನ್ನು ಕೈಗೊಳ್ಳಬೇಕಿದ್ದು, ಆಯಾ ವಲಯ ಹಿರಿಯ ಅಧಿಕಾರಿಗಳು ಖುದ್ದು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು.

ADVERTISEMENT

ಮೆಟ್ರೊ, ಕೆ-ರೈಡ್, ಕೆಪಿಟಿಸಿಎಲ್ ಸೇರಿದಂತೆ ಹಲವು ಇಲಾಖೆಗಳ ವತಿಯಿಂದ ನಗರದಾದ್ಯಂತ ಕಾಮಗಾರಿಗಳು ನಡೆಯುತ್ತಿದ್ದು, ಈ ಸ್ಥಳಗಳಲ್ಲಿ ದುರಸ್ತಿಯಾಗಿರುವ ಕಾಲುವೆಗಳ ಪಟ್ಟಿಯನ್ನು ಸಿದ್ಧಪಡಿಸಿ ಆಯಾ ಸಂಬಂಧಪಟ್ಟ ಇಲಾಖೆಗಳಿಗೆ ವರದಿ ನೀಡಬೇಕು. ಸಂಬಂಧಟ್ಟ ಇಲಾಖೆಗಳು ದುರಸ್ತಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಮಳೆ ಪ್ರಾರಂಭವಾಗುವುದಕ್ಕೂ ಮುಂಚಿತವಾಗಿ ಪೂರ್ಣಗೊಳಿಸಬೇಕು ಎಂದರು.

ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ 82 ಕಡೆ ನೀರು ನಿಲ್ಲುವ ಸ್ಥಳಗಳನ್ನು ಸಂಚಾರ ಪೊಲೀಸ್ ವಿಭಾಗವು ಗುರುತಿಸಿದ್ದು, ಪಾಲಿಕೆಗೆ ಪಟ್ಟಿ ನೀಡಲಾಗಿದೆ. ಸಂಬಂಧಪಟ್ಟ ಎಂಜಿನಿಯರ್‌ಗಳು ಪಟ್ಟಿಯ ಅನುಸಾರ ಸ್ಥಳ ಪರಿಶೀಲಿಸಿ ಸೈಡ್‌ಡ್ರೈನ್‌ಗಳಲ್ಲಿ ಹೂಳೆತ್ತಿ ಸ್ವಚ್ಚಗೊಳಿಸಬೇಕು. ಸಂಚಾರ ದಟ್ಟಣೆಯಾಗುವುದನ್ನು ನಿಯಂತ್ರಿಸಬೇಕು ಎಂದು ಹೇಳಿದರು.

ಆಯಾ ವಲಯ ವ್ಯಾಪ್ತಿಯಲ್ಲಿರುವ ಅಗ್ನಿ ಶಾಮಕ ಠಾಣೆಗಳ ಜೊತೆ ವಲಯ ಆಯುಕ್ತರು ಸದಾ ಸಂಪರ್ಕದಲ್ಲಿರಬೇಕು. ಬಿಬಿಎಂಪಿಯಲ್ಲಿ ಎಂಟು ವಲಯಗಳು ಹಾಗೂ ಪಾಲಿಕೆ ಕೇಂದ್ರ ಕಚೇರಿ ಸೇರಿದಂತೆ ಒಂಬತ್ತು ಶಾಶ್ವತ ನಿಯಂತ್ರಣ ಕೊಠಡಿಗಳು ಹಾಗೂ 63 ಉಪ ವಿಭಾಗಗಳ ನಿಯಂತ್ರಣ ಕೊಠಡಿಗಳು ಸ್ಥಾಪಿಸಲಾಗಲಿದ್ದು, ಎಲ್ಲಾ ನಿಯಂತ್ರಣ ಕೊಠಡಿಗಳಿಗೆ ಪಾಲಿಕೆ, ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳನ್ನು ಕೂಡಲೇ ನಿಯೋಜಿಸಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ವ್ಯಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ರಚಿಸಿ ಅದರ ಮೂಲಕ ಸಮನ್ವಯ ಸಾಧಿಸಿ, ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರು.

‘ಸಂಚಾರ ಪೊಲೀಸ್ ಅಧಿಕಾರಿಗಳು 647 ರಸ್ತೆ ಗುಂಡಿಗಳನ್ನು ಮುಚ್ಚಲು ಪಟ್ಟಿ ನೀಡಿದ್ದು, ಅದರಂತೆ ಈಗಾಗಲೇ 323 ರಸ್ತೆ ಗುಂಡಿಗಳನ್ನು ಮುಚ್ಚಲಾಗಿರುತ್ತದೆ. 239 ರಸ್ತೆ ಗುಂಡಿಗಳು ಬಾಕಿಯಿದ್ದು, ಕೂಡಲೆ ಮುಚ್ಚಲಾಗುವುದು. ಇನ್ನು 90 ರಸ್ತೆ ಗುಂಡಿಗಳು ಬೇರೆ-ಬೇರೆ ಇಲಾಖೆಗಳಿಗೆ ಬರಲಿದ್ದು, ಐದು ರಸ್ತೆಗಳು ಬಿಬಿಎಂಪಿ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್, ‘ನಗರದಲ್ಲಿ ಮಳೆಯಾದ ವೇಳೆ ಹೆಚ್ಚು ಸಮಸ್ಯೆ ಕಂಡುಬರುವ ಸ್ಥಳಗಳಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಅನಂತರ ಯಾವ ಸಮಸ್ಯೆಗಳಿವೆ ಎಂಬುದನ್ನು ಗುರುತಿಸಿ ಇರುವ ಸಮಸ್ಯೆಯನ್ನು ಅಧಿಕಾರಿಗಳೇ ಬಗೆಹರಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.