ADVERTISEMENT

ಬಳ್ಳಾರಿಯಲ್ಲಿ ನಿಗದಿಯಾಗಿದ್ದ ಕಸಾಪ ಸರ್ವಸದಸ್ಯರ ಸಭೆ ರದ್ದು

ಎಲ್ಲ ರೀತಿಯ ಸೌಲಭ್ಯ ಇರುವ ಸ್ಥಳದಲ್ಲಿ ಸಭೆ ನಡೆಸಲು ಸಹಕಾರ ಇಲಾಖೆ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 15:54 IST
Last Updated 27 ಜೂನ್ 2025, 15:54 IST
   

ಬೆಂಗಳೂರು: ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಇದೇ 29ಕ್ಕೆ ನಿಗದಿಯಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಸರ್ವಸದಸ್ಯರ ಸಭೆಯನ್ನು ರದ್ದುಪಡಿಸಿ ಸಹಕಾರ ಇಲಾಖೆ ಆದೇಶ ಹೊರಡಿಸಿದೆ. 

ಈ ಸಭೆಗೆ ಗೊತ್ತುಪಡಿಸಿದ ಸ್ಥಳವು ಸೂಕ್ತವಾಗಿಲ್ಲ. ಪರಿಷತ್ತಿನ ಸರ್ವಸದಸ್ಯರ ಹಿತದೃಷ್ಟಿಯಿಂದ ಈ ಸಭೆಯನ್ನು ರದ್ದುಪಡಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಸದಸ್ಯರು ಭಾಗವಹಿಸಲು ಅನುಕೂಲವಾಗುವಂತೆ, ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿರುವ ಸ್ಥಳದಲ್ಲಿ ಸಭೆ ನಡೆಸಬೇಕು ಎಂದು ಸೂಚಿಸಲಾಗಿದೆ. 

ಈ ಸಭೆಯನ್ನು ರದ್ದುಪಡಿಸುವಂತೆ ಜಾಣಗೆರೆ ವೆಂಕಟರಾಮಯ್ಯ, ಡಾ.ವಸುಂಧರಾ ಭೂಪತಿ ಹಾಗೂ ಇತರರು ಸಹಕಾರ ಇಲಾಖೆಗೆ ಮನವಿ ಮಾಡಿದ್ದರು. ‘ಪರಿಷತ್ತಿನ ಲೆಕ್ಕಪತ್ರಕ್ಕೆ ವಾಮಮಾರ್ಗದ ಮೂಲಕ ಅನುಮೋದನೆ ಪಡೆದುಕೊಳ್ಳಲು ಕಸಾಪ ಅಧ್ಯಕ್ಷರು ಪ್ರಯತ್ನಿಸುತ್ತಿದ್ದಾರೆ. ಈ ಸಭೆಯ ಬಗ್ಗೆ ಆಜೀವ ಸದಸ್ಯರಿಗೆ ನೋಟಿಸ್ ಕೂಡ ನೀಡಿಲ್ಲ. ಮೂಲಸೌಕರ್ಯ ಇಲ್ಲದ ಸ್ಥಳದಲ್ಲಿ ಈ ಸಭೆ ನಡೆಸುತ್ತಿದ್ದು, ಪರಿಷತ್ತಿನ ಬೈ–ಲಾಕ್ಕೆ ವಾಮಮಾರ್ಗದಲ್ಲಿ ತಿದ್ದುಪಡಿಗೆ ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಈ ಸಭೆಯನ್ನು ಬೆಂಗಳೂರು ಅಥವಾ ಹೆಚ್ಚು ಸದಸ್ಯರಿರುವ ಜಿಲ್ಲಾ ಕೇಂದ್ರದಲ್ಲಿ, ಮೂಲಸೌಕರ್ಯ ಇರುವ ಪ್ರದೇಶದಲ್ಲಿ ನಡೆಸಬೇಕು’ ಎಂದು ಮನವಿ ಮಾಡಿದ್ದರು. 

ADVERTISEMENT

ಈ ಬಗ್ಗೆ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಇತರರು ಕೂಡ ದೂರು ನೀಡಿ, ಕಸಾಪ ಅಧ್ಯಕ್ಷರ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. 

ಮೂಲ ಸೌಲಭ್ಯ ಹಾಗೂ ವಸತಿ ಸೌಲಭ್ಯದ ಕೊರತೆ ಎದುರಿಸುತ್ತಿರುವ ಸಂಡೂರು ಸಭೆ ನಡೆಸಲು ಯೋಗ್ಯವಾದ ಸ್ಥಳವಲ್ಲ ಎಂದು ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ಅವರು ತಾಲ್ಲೂಕು ದಂಡಾಧಿಕಾರಿಗೆ ವರದಿ ಸಲ್ಲಿಸಿದ್ದರು. ಈ ವರದಿ ಆಧಾರದಲ್ಲಿ ಸಭೆಗೆ ಅವಕಾಶ ನೀಡದಂತೆ ಜಿಲ್ಲಾಧಿಕಾರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರದಿ ಸಲ್ಲಿಸಿದ್ದರು.

ಸೂಕ್ತ ಸ್ಥಳಾವಕಾಶ, ಮೂಲಸೌಲಭ್ಯದ ಕೊರತೆ ಹಾಗೂ ವಸತಿ ಸಮಸ್ಯೆಯ ಕಾರಣ ಸಭೆಯನ್ನು ರದ್ದುಪಡಿಸಲು ತೀರ್ಮಾನಿಸಿರುವುದಾಗಿ ಸಹಕಾರ ಸಂಘಗಳ ಉಪ ನಿಬಂಧಕರು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.