ADVERTISEMENT

ಹೆಚ್ಚುವರಿ ಕಮಿಷನರ್ ನೇತೃತ್ವದಲ್ಲಿ ತನಿಖೆ

* ಅತ್ಯಾಚಾರವೆಸಗಿ ಮತಾಂತರಕ್ಕೆ ಯತ್ನ; ಆರೋಪ * ಪೊಲೀಸ್ ಕಮಿಷನರ್‌ಗೆ ದೂರು

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 17:57 IST
Last Updated 5 ಜನವರಿ 2020, 17:57 IST

ಬೆಂಗಳೂರು: ‘ಕಾಸರಗೋಡಿನ ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಿ, ಮತಾಂತರಕ್ಕೆ ಯತ್ನಿಸಲಾಗಿದೆ’ ಎಂಬ ಆರೋಪದ ತನಿಖೆಯನ್ನು ನಗರದ ಹೆಚ್ಚುವರಿ ಕಮಿಷನರ್ ಅವರಿಗೆ ವಹಿಸಲಾಗಿದೆ.

ನಗರದ ಪೊಲೀಸ್ ಕಮಿಷನರ್ ಭಾಸ್ಕರ್‌ ರಾವ್ ಅವರ ಕಚೇರಿಗೆ ಸಂಸದೆ ಶೋಭಾ ಕರಂದ್ಲಾಜೆ ಅವರ ಜೊತೆಯಲ್ಲಿ ಭಾನುವಾರ ಬಂದಿದ್ದ ಸಂತ್ರಸ್ತ ಯುವತಿ, ‘ಕಾಸರಗೋಡಿನವರೇ ಆದ ಯುವಕರಿಬ್ಬರು ಅತ್ಯಾಚಾರ ಎಸಗಿ, ಅವರ ಧರ್ಮಕ್ಕೆ ಮತಾಂತರವಾಗುವಂತೆ ಪೀಡಿಸುತ್ತಿದ್ದಾರೆ’ ಎಂದು ದೂರು ನೀಡಿದರು.

‘ಯುವಕರ ವಿರುದ್ಧ ಕಾಸರಗೋಡು ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಸದ್ಯ ಅವರಿಬ್ಬರೂ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಠಾಣೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು’ ಎಂದು ಯುವತಿ ಒತ್ತಾಯಿಸಿದರು.

ADVERTISEMENT

ದೂರಿನ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಭಾಸ್ಕರ್ ರಾವ್, ‘ಘಟನೆ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಬೇಕಿದೆ. ಹೀಗಾಗಿಯೇ, ಪ್ರಕರಣದ ಬಗ್ಗೆ ಪ್ರಾಥಮಿಕ ತನಿಖೆ ನಡೆಸುವಂತೆ ಹೆಚ್ಚುವರಿ ಪೊಲೀಸ್ ಕಮಿಷನರ್‌ ಅವರಿಗೆ ಸೂಚಿಸಿದ್ದೇನೆ. ಅವರಿಂದ ವರದಿ ಬಂದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಅಪ್ರಾಪ್ತೆಯಾಗಿದ್ದಾಗಲೇ ಲೈಂಗಿಕ ದೌರ್ಜನ್ಯ: ದೂರು ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶೋಭಾ ಕರಂದ್ಲಾಜೆ, ‘ಯುವತಿ ಅಪ್ರಾಪ್ತೆ ಆಗಿದ್ದಾಗಿನಿಂದಲೇ ಆರೋಪಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆಕೆಗೆ ಸಾಕಷ್ಟು ನೋವು ಹಾಗೂ ಅನ್ಯಾಯ ಆಗಿದೆ. ಕೆಲ ದಿನಗಳ ಹಿಂದಷ್ಟೇ ನನ್ನನ್ನು ಸಂಪರ್ಕಿಸಿ ಅಳಲು ತೋಡಿಕೊಂಡಿದ್ದಾಳೆ’ ಎಂದರು.

‘ಯುವತಿಯನ್ನು ಕಾಸರಗೋಡು, ಮಂಗಳೂರು ಹಾಗೂ ಬೆಂಗಳೂರಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅನ್ಯ ಧರ್ಮಕ್ಕೆ ಮತಾಂತರವಾಗುವಂತೆ ಯುವತಿಯ ಇಡೀ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.