ADVERTISEMENT

ಕೋಟಿ ಕೊಟ್ಟರೂ ಮನೆಗಳಿಗೆ ತಲುಪದ ‘ಕಾವೇರಿ’

* ನೀರು ಪೂರೈಕೆ ಪ್ರಮಾಣ ಕಡಿಮೆ; ಬಿಲ್‌ ಮಾತ್ರ ದುಬಾರಿ– ಬಳಕೆದಾರರ ಆರೋಪ

ಗಾಣಧಾಳು ಶ್ರೀಕಂಠ
Published 16 ಏಪ್ರಿಲ್ 2025, 19:55 IST
Last Updated 16 ಏಪ್ರಿಲ್ 2025, 19:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕೋಟಿ ರೂಪಾಯಿ ಕೊಟ್ಟು ಕಾವೇರಿ ಸಂಪರ್ಕ ಪಡೆದರೂ ನಮಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ, ಮನೆಗಳಿಗೆ ಸರಬರಾಜು ಮಾಡುತ್ತಿರುವ ನೀರು ಸಾಕಾಗುತ್ತಿಲ್ಲ...’ ಇದು ವೈಟ್‌ಫೀಲ್ಡ್, ಬೆಳ್ಳಂದೂರು ಸುತ್ತಮುತ್ತಲಿನ ಅಪಾರ್ಟ್‌ಮೆಂಟ್‌ ನಿವಾಸಿಗಳ ದೂರು.

ಈ ಭಾಗದ ಕೆಲವು ವಸತಿ ಸಮುಚ್ಚಯಗಳಿಗೆ ಮೂರ್ನಾಲ್ಕು ವರ್ಷಗಳಿಂದ ಬರುತ್ತಿದ್ದ ಕಾವೇರಿ ನೀರು, 5ನೇ ಹಂತದ ಯೋಜನೆ ಆರಂಭವಾದ ಮೇಲೆ ನಿಂತೇ ಹೋಗಿದೆ. ಇನ್ನೂ ಕೆಲವು ಅಪಾರ್ಟ್‌ಮೆಂಟ್‌ಗಳಿಗೆ ಸರಿಯಾಗಿ ತಲಾವಾರು ನೀರು ಪೂರೈಕೆಯಾಗುತ್ತಿಲ್ಲ. ಮಹದೇವಪುರ ಭಾಗದಲ್ಲಿ ಹೊಸ ಸಂಪರ್ಕಕ್ಕೆ ಕೊಳವೆಗಳನ್ನು ಜೋಡಿಸಲು ರಸ್ತೆಗಳನ್ನು ಅಗೆದ ನಂತರ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿದೆ ಎಂಬುದು ಸ್ಥಳೀಯರ ಆರೋಪ.

14 ತಿಂಗಳಿನಿಂದ ನೀರಿಲ್ಲ

ADVERTISEMENT

‘ವೈಟ್‌ಫೀಲ್ಡ್‌ನ ತೂಬರಹಳ್ಳಿ ಸಮೀಪದ ಕೀರ್ತಿ ಗಾರ್ಡೇನಿಯಾ ಅಪಾರ್ಟ್‌ಮೆಂಟ್‌ಗೆ ಕಾವೇರಿ ನೀರು ಪೂರೈಕೆಯಾಗುತ್ತಿತ್ತು. ಕಾವೇರಿ 5ನೇ ಹಂತದ ಯೋಜನೆಯಡಿ ಹೊಸ ಕೊಳವೆಗಳನ್ನು ಜೋಡಿಸಿದ ನಂತರ, ಅಪಾರ್ಟ್‌ಮೆಂಟ್‌ಗೆ ನೀಡಿದ್ದ ಹಳೆಯ ನೀರಿನ ಸಂಪರ್ಕ ನಿಲ್ಲಿಸಿ, ಹೊಸ ಸಂಪರ್ಕ ಕಲ್ಪಿಸಲಾಯಿತು. ಆಗಿನಿಂದ ಕಾವೇರಿ ನೀರು ಬರುತ್ತಿಲ್ಲ. ಟ್ಯಾಂಕರ್‌ ನೀರಿನ ಮೇಲೆ ಅವಲಂಬನೆಯಾಗಿದ್ದೇವೆ’ ಎಂದು ನಿವಾಸಿ ಮನೀಶ್ ತ್ಯಾಗಿ ಹೇಳುತ್ತಾರೆ.

ಕಾಮಗಾರಿ ವಿಳಂಬದಿಂದ ಬೇಸತ್ತ ಅಪಾರ್ಟ್‌ಮೆಂಟ್‌ ನಿವಾಸಿಯೊಬ್ಬರು, ‘ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಸಿಲುಕಿದ್ದ ಗಗನಯಾತ್ರಿಗಳನ್ನು ಯಶಸ್ವಿಯಾಗಿ ಭೂಮಿಗೆ ಕರೆತರಲಾಯಿತು. ಆದರೆ, 14 ತಿಂಗಳ ಹಿಂದೆ 1 ಕಿ.ಮೀ ದೂರದಲ್ಲಿ ಕಡಿತಗೊಂಡಿರುವ ಕಾವೇರಿ ಸಂಪರ್ಕವನ್ನು ಸರಿಪಡಿಸಿ ನೀರನ್ನು ಮರಳಿ ಪಡೆಯಲು ನಮಗೆ ಸಾಧ್ಯವಾಗುತ್ತಿಲ್ಲ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪೋಸ್ಟ್‌ನಲ್ಲಿ 2024ರ ಜನವರಿಯಿಂದ 2025ರ ಏಪ್ರಿಲ್‌ವರೆಗೆ ಏನೆಲ್ಲ ಕಾಮಗಾರಿ ನಡೆದಿದೆ ಎಂಬ ಮಾಹಿತಿಯನ್ನೂ ಹಂಚಿಕೊಂಡು, ಜಲಮಂಡಳಿ ಅಧ್ಯಕ್ಷರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಟ್ಯಾಗ್ ಮಾಡಿದ್ದಾರೆ.

ವರ್ತೂರು ಮುಖ್ಯ ರಸ್ತೆಯಲ್ಲಿರುವ ಶ್ರೀರಾಮ್‌ ಸಮೃದ್ಧಿ ಅಪಾರ್ಟ್‌ಮೆಂಟ್‌ಗೂ ಒಂದು ವರ್ಷದಿಂದ ಕಾವೇರಿ ನೀರು ಪೂರೈಕೆಯಾಗುತ್ತಿಲ್ಲ. ಇದೂ ಕೂಡ, ಕೀರ್ತಿ ಗಾರ್ಡೇನಿಯಾ ಅಪಾರ್ಟ್‌ಮೆಂಟ್ ಕತೆಯೇ.

‘ನಮ್ಮದು ಮಾತ್ರವಲ್ಲ, ಸುತ್ತಮುತ್ತಲಿನ ಏಳೆಂಟು ಅಪಾರ್ಟ್‌ಮೆಂಟ್‌ಗಳಿಗೂ ಕಾವೇರಿ ನೀರು ಸಮಪರ್ಕವಾಗಿ ಪೂರೈಕೆಯಾಗುತ್ತಿಲ್ಲ. ಈ‌ ಬಗ್ಗೆ ಜಲಮಂಡಳಿಗೆ ದೂರು‌ ನೀಡಿದ್ದಾಗಿದೆ. ಸಮಸ್ಯೆ ಬಗೆಹರಿದಿಲ್ಲ’ ಎನ್ನುತ್ತಾರೆ ಶ್ರೀರಾಮ್‌ ಸಮೃದ್ಧಿ ಅಪಾರ್ಟ್‌ಮೆಂಟ್ ನಿವಾಸಿ ಸಲೀಂ.

ಕಡಿಮೆ ನೀರು ಪೂರೈಕೆ:

ಮಹದೇವಪುರ ವ್ಯಾಪ್ತಿಯಲ್ಲಿ ವೈಟ್‌ಫೀಲ್ಡ್ ಮುಖ್ಯ ರಸ್ತೆಯಲ್ಲಿರುವ ಟ್ರೈಫೆಕ್ಟ ಸ್ಟಾರ್‌ಲೈಟ್‌ ಅಪಾರ್ಟ್‌ಮೆಂಟ್‌ನಲ್ಲಿ ವಾರಕ್ಕೆ ಎರಡು ದಿನ ಕಾವೇರಿ ನೀರು ಪೂರೈಕೆಯಾಗುತ್ತದೆ. ಆದರೆ, ಜಲಮಂಡಳಿ ತಲಾವಾರು ನಿಗದಿಪಡಿಸಿರುವಂತೆ ಪ್ರತಿ ಮನೆಗೆ ನಿತ್ಯ 200 ಲೀಟರ್‌ ನೀರು ಪೂರೈಕೆಯಾಗುತ್ತಿಲ್ಲ ಎಂಬುದು ನಿವಾಸಿಗಳ ಆರೋಪ.

‘ಜಲಮಂಡಳಿ ಪ್ರಕಾರ, ನಾಲ್ಕು ಜನರಿರುವ ಒಂದು ಮನೆಗೆ ಪ್ರತಿ ನಿತ್ಯ 200 ಲೀಟರ್‌ ನೀರು ಪೂರೈಕೆ ನಿಗದಿಪಡಿಸಿದೆ. ಆದರೆ, ನಮ್ಮ ಅಪಾರ್ಟ್‌ಮೆಂಟ್‌ನ ಪ್ರತಿ ಮನೆಗೆ, ನಿತ್ಯ 172 ಲೀಟರ್‌ಗಿಂತ ಹೆಚ್ಚು ನೀರು ಪೂರೈಕೆಯಾಗುತ್ತಿಲ್ಲ’ ಎಂದು ಟ್ರೈಫೆಕ್ಟ ಸ್ಟಾರ್‌ಲೈಟ್ ಅಪಾರ್ಟ್‌ಮೆಂಟ್ ನಿವಾಸಿ ಹಾಗೂ ಬೆಂಗಳೂರು ಅಪಾರ್ಟ್‌ಮೆಂಟ್‌ಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿಷ್ಣು ಗಟ್ಟುಪಲ್ಲಿ ಅಂಕಿ ಅಂಶಗಳನ್ನು ತೆರೆದಿಡುತ್ತಾರೆ.

‘ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ 172 ಫ್ಲ್ಯಾಟ್‌ಗಳಿವೆ. ಪ್ರತಿ ಫ್ಲ್ಯಾಟ್‌ನಲ್ಲಿ ಸರಾಸರಿ 4 ಮಂದಿ ಇರುತ್ತಾರೆಂದು ಅಂದಾಜಿಸಿದರೆ, ಜಲಮಂಡಳಿ ಪ್ರಕಾರ, ನಿತ್ಯ, ಪ್ರತಿ ವ್ಯಕ್ತಿಗೆ 50 ಲೀಟರ್‌ ನೀರು ಪೂರೈಸಬೇಕು. ಆದರೆ ಈಗ ಪೂರೈಕೆಯಾಗುತ್ತಿರುವುದು 43 ಲೀಟರ್‌ ಮಾತ್ರ’ ಎಂದು ಅವರು ಲೆಕ್ಕಾಚಾರ ನೀಡುತ್ತಾರೆ.

‘ನೀರು ಪೂರೈಕೆ ಕಡಿಮೆಯಾಗಿರುವುದರಿಂದ, ಟ್ಯಾಂಕರ್‌ ನೀರು ತರಿಸಿಕೊಳ್ಳಬೇಕಿದೆ. ನೀರಿಗಾಗಿ ತಿಂಗಳಿಗೆ ₹3 ಸಾವಿರದಿಂದ ₹4 ಸಾವಿರದವರೆಗೆ ಹೆಚ್ಚುವರಿ ವೆಚ್ಚವಾಗುತ್ತಿದೆ. ಕಾವೇರಿ ಸಂಪರ್ಕ ಪಡೆಯಲು ₹1.4 ಕೋಟಿ ಶುಲ್ಕ ಪಾವತಿಸಿದ್ದರೂ, ಟ್ಯಾಂಕರ್ ನೀರು ತರಿಸಿಕೊಳ್ಳುವುದು ತಪ್ಪಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಈ ಅಪಾರ್ಟ್‌ಮೆಂಟ್‌ಗೆ ಎಂಟು ವರ್ಷಗಳ ಹಿಂದೆ ಕಾವೇರಿ ಸಂಪರ್ಕ ಪಡೆಯಲಾಗಿದೆ. ಕಳೆದ ವರ್ಷದವರೆಗೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿತ್ತು. ವರ್ಷದಿಂದ ಈಚೆಗೆ ಸಮಸ್ಯೆಯಾಗಿದೆ. ಈ ಬಗ್ಗೆ ಜಲಮಂಡಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

- ‘ನೀರಿನ ಪ್ರಮಾಣ ಹೆಚ್ಚಿಸಬೇಕು

’ ಆರ್‌.ಆರ್‌.ನಗರ ವಲಯದ ಕೆಂಗುಂಟೆ ವ್ಯಾಪ್ತಿಯಲ್ಲಿ ಕೆ.ಆರ್‌.ಪುರ ಭಾಗದ ರಾಮಮೂರ್ತಿ ನಗರ ಹೆಮ್ಮಿಗೆಪುರ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ನೀರು ಬರದಿದ್ದರೂ ದುಬಾರಿ ಬಿಲ್ ಬರುತ್ತಿದೆ ಎಂದು ನಾಗರಿಕರು ಆರೋಪಿಸುತ್ತಾರೆ. ಕೆಂಗುಂಟೆಯಲ್ಲಿ ಹಳೇ ಪೈಪುಗಳನ್ನು ತೆಗೆದು ಹೊಸ ಕೊಳವೆ ಅಳವಡಿಸಿದ ಮೇಲೆ ನೀರಿನ ಪೂರೈಕೆ ಪ್ರಮಾಣ ಕಡಿಮೆಯಾಗಿದೆ. ಬಿಡುವ ಅವಧಿಯೂ ಕಡಿಮೆಯಾಗಿದೆ. ಬಿಲ್ ಮಾತ್ರ ಹೆಚ್ಚು ಬರುತ್ತದೆ ಎನ್ನುತ್ತಾರೆ ನಾಗರಿಕರು. ಜಲಮಂಡಳಿ ನಗರದ ಕೆಲವೆಡೆ ವಾರಕ್ಕೆ ಎರಡು ದಿನ ಇನ್ನೂ ಕೆಲವು ಕಡೆ ಮೂರು ದಿನ ಕಾವೇರಿ ನೀರು ಪೂರೈಸುತ್ತಿದೆ. ಆದರೆ ನೀರು ಪೂರೈಕೆ ಅವಧಿ ತೀರಾ ಕಡಿಮೆ. ಪೂರೈಕೆಯಾಗುವ ನೀರಿನ ಪ್ರಮಾಣವೂ ತೀರಾ ಕಡಿಮೆ ಇರುತ್ತದೆ ಎಂದು ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.