ADVERTISEMENT

ಕೆಂಪೇಗೌಡ ಅಧ್ಯಯನ ಕೇಂದ್ರ ಕಾಮಗಾರಿ ನನೆಗುದಿಗೆ

ಶಂಕುಸ್ಥಾಪನೆಗೊಂಡು ಒಂದೂವರೆ ವರ್ಷ ಕಳೆದರೂ ಆರಂಭವಾಗಿಲ್ಲ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 20:08 IST
Last Updated 25 ಮಾರ್ಚ್ 2019, 20:08 IST
ಕೆಂಪೇಗೌಡರ ಪ್ರತಿಮೆ
ಕೆಂಪೇಗೌಡರ ಪ್ರತಿಮೆ   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೆಂಪೇಗೌಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಒಂದೂವರೆ ವರ್ಷ ಗತಿಸಿದರೂ ಯಾವುದೇ ಕಾಮಗಾರಿ ಆರಂಭಗೊಂಡಿಲ್ಲ.

ಕೆಂಪೇಗೌಡರ ಆಡಳಿತ ಮತ್ತು ಅವರ ಜೀವನ ಚರಿತ್ರೆಯನ್ನು ಕಟ್ಟಿಕೊಡುವುದು ಹಾಗೂ ಅವರ ಮುಂದಾಳತ್ವದಲ್ಲಿ ನಗರದಲ್ಲಿ ನಿರ್ಮಾಣವಾಗಿದ್ದ ಕೆರೆಕಟ್ಟೆಗಳು, ದೇವಾಲಯಗಳು, ನಗರದ ಗಡಿಗೋಪುರಗಳ ಬಗ್ಗೆ ಜನರಿಗೆ ಸಮಗ್ರ ಮಾಹಿತಿ ನೀಡುವುದು ಈ ಕೇಂದ್ರದ ಉದ್ದೇಶವಾಗಿದೆ. ಈ ಕೇಂದ್ರಕ್ಕೆ 2017ರ ಸೆ.9ರಂದು ಶಂಕುಸ್ಥಾಪನೆ ನಡೆಸಲಾಗಿತ್ತು.

ಹಿಂದಿನ ಸರ್ಕಾರದ ಅವಧಿಯಲ್ಲಿ ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ಸ್ಕೂಲ್‌ ಆಫ್‌ ಎಕನಾಮಿಕ್ಸ್‌, ಈಶಾನ್ಯ ರಾಜ್ಯಗಳ ವಿದ್ಯಾರ್ಥಿನಿಯರ ವಸತಿನಿಲಯ ಹಾಗೂಕೆಂಪೇಗೌಡ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಆರಂಭಿಸಲು ಮಂಜೂರಾತಿ ಸಿಕ್ಕಿತ್ತು. ಈ ಪೈಕಿ, ಡಾ.ಬಿ.ಆರ್‌.ಅಂಬೇಡ್ಕರ್ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಕಾಮಗಾರಿ ಕಳೆದ ವರ್ಷವೇ ಆರಂಭವಾಗಿದೆ. ಈಶಾನ್ಯ ರಾಜ್ಯಗಳ ವಿದ್ಯಾರ್ಥಿನಿಯರ ವಸತಿನಿಲಯ ಕಟ್ಟಡಮಾ.6ರಂದು ಉದ್ಘಾಟನೆಗೊಂಡಿದೆ. ಆದರೆ,ಕೆಂಪೇಗೌಡ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಕಾಮಗಾರಿಯನ್ನು ಇದುವರೆಗೂ ಆರಂಭಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ADVERTISEMENT

ಕೆಂಪೇಗೌಡರ ಸಾಧನೆಗಳ ಕುರಿತು ಅಧ್ಯಯನ ನಡೆಸುವ ವಿದ್ಯಾರ್ಥಿಗಳು,ಈ ಕೇಂದ್ರವು ಇನ್ನೂ ಆರಂಭವಾಗದ ಕಾರಣ ಪರ್ಯಾಯ ವ್ಯವಸ್ಥೆಯ ಮೊರೆ ಹೋಗಬೇಕಾಗಿದೆ. ಐವರು ಸಂಶೋಧನಾ ವಿದ್ಯಾರ್ಥಿಗಳು ಸಮಾಜ ವಿಜ್ಞಾನ ವಿಭಾಗದ ಕಟ್ಟಡದಲ್ಲೇ ಅಧ್ಯಯನ ನಡೆಸಬೇಕಾಯಿತು. ಈ ಕೇಂದ್ರವು ಆರಂಭವಾದರೆ ಅವರ ಉನ್ನತ ಮಟ್ಟದ ಸಂಶೋಧನೆಗೆ ಪೂರಕವಾದವ್ಯವಸ್ಥೆ ಹಾಗೂ ಸೌಲಭ್ಯಗಳು ಸಿಗಲಿವೆ. ಕೆಂಪೇಗೌಡರ ಕುರಿತು ಭವಿಷ್ಯದಲ್ಲಿ ಅಧ್ಯಯನ ನಡೆಸುವವರಿಗೆ ಇದರಿಂದ ಅನುಕೂಲವಾಗಲಿದೆ.

‘ತುಮಕೂರು, ಕೋಲಾರ, ಯಲಹಂಕ, ದೇವನಹಳ್ಳಿ ಮುಂತಾದ ಸ್ಥಳಗಳಿಗೆ ತೆರಳಿ ಕೆಂಪೇಗೌಡದ ಕುರಿತು ಕ್ಷೇತ್ರಕಾರ್ಯಕ್ಕೆ ನಡೆಸಲು ವಾಹನ ವ್ಯವಸ್ಥೆ ಕಲ್ಪಿಸುವುದಾಗಿ ಬಿಬಿಎಂಪಿಯು ಭರವಸೆ ನೀಡಿತ್ತು. ಈ ಬಗ್ಗೆ ಇನ್ನೂ ಕ್ರಮಕೈಗೊಂಡಿಲ್ಲ. ಅಧ್ಯಯನ ಕೇಂದ್ರದ ಕಾರ್ಯ ನಿರ್ವಹಣೆಗೆ ವಾರ್ಷಿಕ ವರಮಾನವಾಗಿ ₹15 ಲಕ್ಷ ಹಣವನ್ನು ಬಿಡುಗಡೆ ಮಾಡುವುದಕ್ಕೂ ಮೀನಾ ಮೇಷ ಎಣಿಸುತ್ತಿದೆ’ ಎಂದು ಕೆಂಪೇಗೌಡ ಅಧ್ಯಯನ ಕೇಂದ್ರ ಹೊಣೆ ಹೊತ್ತಿರುವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಅಧ್ಯಯನ ಕೇಂದ್ರದಲ್ಲಿ ನಾಡುಪ್ರಭು ಕೆಂಪೇಗೌಡರ ಪರಂಪರೆಯನ್ನು ಬಿಂಬಿಸುವ ಭವನ ನಿರ್ಮಾಣ, ಹವಾನಿಯಂತ್ರಿತ ವ್ಯವಸ್ಥೆಯುಳ್ಳ ವಿಶಾಲವಾದ ಸಭಾಂಗಣ, ಆಡಳಿತ ಕಚೇರಿ, ವಸ್ತು ಸಂಗ್ರಹಾಲಯ, ನಾಡಪ್ರಭು ಕೆಂಪೇಗೌಡರ 30 ಅಡಿ ಎತ್ತರದ ಕಂಚಿನ ಪ್ರತಿಮೆ ಹಾಗೂ ಸುಸಜ್ಜಿತ ಕೊಠಡಿಗಳು ನಿರ್ಮಾಣವಾಗಬೇಕಿದೆ. ‘ಈಅಧ್ಯಯನ ಕೇಂದ್ರಕ್ಕಾಗಿಮೀಸಲಿ‌ಟ್ಟಿರುವ ಜಾಗದಲ್ಲಿ30 ನೀಲಗಿರಿ ಮರಗಳು ಹಾಗೂ ಇತರೆ ಮರಗಳು ಇದ್ದವು. ಅರಣ್ಯ ಇಲಾಖೆ 5 ತಿಂಗಳ ಹಿಂದೆಟೆಂಡರ್‌ ಕರೆದು, ಈ ಮರಗಳನ್ನುಕಟಾವು ಮಾಡಿದೆ. ಮರಗಳನ್ನು ತೆರವುಗೊಳಿಸಲು ತೋರಿದಷ್ಟು ಆಸಕ್ತಿಯನ್ನು ಈ ಕೇಂದ್ರದ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಲು ತೋರಿಸುತ್ತಿಲ್ಲ’ ಎಂದು ವಿದ್ಯಾರ್ಥಿಗಳು ದೂರಿದರು.

*ಕಟ್ಟಡಕ್ಕೆ ಸಂಬಂಧಿಸಿದ ನೀಲನಕ್ಷೆ ಹಾಗೂ ಎಲ್ಲ ದಾಖಲೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ವಿಶ್ವವಿದ್ಯಾಲಯದ ವತಿಯಿಂದ ಜಮೀನು ನೀಡಿ<br/>ದ್ದೇವೆ. ನಿರ್ಮಾಣದ ಹೊಣೆ ಬಿಬಿಎಂಪಿಯದು

- ಶೇಖ್‌ ಮೆಸ್ತಾನ್‌, ನಿರ್ದೇಶಕ, ಕೆಂಪೇಗೌಡ ಅಧ್ಯಯನ ಕೇಂದ್ರ

* ಅಧ್ಯಯನ ಕೇಂದ್ರದ ಕಾಮಗಾರಿಗೆ ಟೆಂಡರ್‌ ಕರೆಯುವ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಿದೆ. ಚುನಾವಣೆ ನೀತಿಸಂಹಿತೆ ಮುಗಿದ ಬಳಿಕ ಟೆಂಡರ್‌ ಕರೆಯಲಿದ್ದೇವೆ
- ಎನ್‌. ಮಂಜುನಾಥ್ ಪ್ರಸಾದ್‌, ಬಿಬಿಎಂಪಿ ಆಯುಕ್ತ

* ಇದು ₹50 ಕೋಟಿ ಯೋಜನೆ ಹಾಗಾಗಿ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುವ ಅಗತ್ಯವಿದೆ. ಕಾಮಗಾರಿ ಆರಂಭಿಸಲು ನೀತಿಸಂಹಿತೆಯೂ ಅಡ್ಡಿಯಾಗಿದೆ

- ಕೆ.ಆರ್‌.ವೇಣುಗೋಪಾಲ್‌, ಕುಲಪತಿ, ಬೆಂಗಳೂರು ವಿ ವಿ

ಅಂಕಿ ಅಂಶ

₹ 50 ಕೋಟಿ

ಅಧ್ಯಯನ ಕೇಂದ್ರದ ಅಭಿವೃದ್ಧಿಗೆ ಮಂಜೂರಾದ ಅನುದಾನ

3 ಎಕರೆ

ನಿರ್ಮಾಣಕ್ಕೆ ಮೀಸಲಿಟ್ಟರುವ ಜಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.