ADVERTISEMENT

ಕೈಗವಸು ಹೆಸರಿನಲ್ಲಿ ₹ 24 ಲಕ್ಷ ವಂಚನೆ; ಮಧುರೈನಲ್ಲಿ ಸಿಕ್ಕಿಬಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 16:55 IST
Last Updated 8 ಜನವರಿ 2021, 16:55 IST

ಬೆಂಗಳೂರು: ಕಡಿಮೆ ಬೆಲೆಗೆ ಕೈಗವಸು (ಗ್ಲೌಸ್) ಮಾರಾಟ ಮಾಡುವುದಾಗಿ ಹೇಳಿ ನಗರದ ನಿವಾಸಿಯೊಬ್ಬರಿಂದ ₹ 24 ಲಕ್ಷ ಪಡೆದು ವಂಚಿಸಿದ್ದ ಆರೋಪಿ ಲೀನಾ ಅಗರ್‌ವಾಲ್, ಮಧುರೈನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

‘ನಗರದ ವಿನ್‌ಟೆಕ್ ಎಂಟರ್‌ಪ್ರೈಸಸ್ ಕಂಪನಿ ಮಾಲೀಕರಾದ ಶಿಲ್ಪಶ್ರೀ ಅವರನ್ನು ವಂಚಿಸಿದ್ದ ಆರೋಪಿ, ತಲೆಮರೆಸಿಕೊಂಡು ಓಡಾಡುತ್ತಿದ್ದರು. ತಮಿಳುನಾಡಿನಲ್ಲೂ ಕೃತ್ಯ ಎಸಗಿದ್ದ ಲೀನಾ ಅವರನ್ನು ಅಲ್ಲಿಯ ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಾಡಿ ವಾರೆಂಟ್ ಪಡೆದು ಆರೋಪಿಯನ್ನು ಕಸ್ಟಡಿಗೆ ಪಡೆದು ನಗರಕ್ಕೆ ಕರೆತರಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ವೈದ್ಯಕೀಯ ಸಲಕರಣೆ ಪೂರೈಸುವ ವಿನ್‌ಟೆಕ್ ಎಂಟರ್‌ಪ್ರೈಸಸ್ ಕಂಪನಿ ಕಚೇರಿ, ಕೆಂಗೇರಿ ಬಿಎಂಟಿಸಿ ಬಸ್ ನಿಲ್ದಾಣ ಬಳಿ ಇದೆ. ಕೈಗವಸು ಖರೀದಿಸಲು ಮುಂದಾಗಿದ್ದ ಕಂಪನಿ ಮಾಲೀಕರಾದ ಶಿಲ್ಪಶ್ರೀ, ಕಳೆದ ಜುಲೈ 28ರಂದು ‘ಆರ್ಕೆಡ್’ ಕಂಪನಿ ಪ್ರತಿನಿಧಿ ಎನ್ನಲಾದ ಆರೋಪಿಯನ್ನು ಸಂಪರ್ಕಿಸಿದ್ದರು.’

ADVERTISEMENT

‘₹ 53.08 ಲಕ್ಷ ಮೊತ್ತದ ಕೈಗವಸು ಖರೀದಿಗೆ ಮಾತುಕತೆ ಆಗಿತ್ತು. ₹ 24 ಲಕ್ಷ ಮುಂಗಡವಾಗಿ ಪಡೆದಿದ್ದ ಆರೋಪಿ, ಹಲವು ದಿನ ಕಳೆದರೂ ಕೈಗವಸು ಕಳುಹಿಸಿರಲಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದರು. ಈ ಬಗ್ಗೆ ಶಿಲ್ಪಶ್ರೀ ಕೆಂಗೇರಿ ಠಾಣೆಗೆ ದೂರು ನೀಡಿದ್ದರು’ ಎಂದೂ ಮೂಲಗಳು ಹೇಳಿವೆ.

‘ಲೀನಾ ಅಗರ್‌ವಾಲ್, ಗೀತಾ ಅಗರವಾಲ್ ಹಾಗೂ ವಿನೋಜ್ ನೂರ್ ಅಹಮ್ಮದ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇದೀಗ ಲೀನಾ ಸಿಕ್ಕಿಬಿದ್ದಿದ್ದಾರೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ’ ಎಂದೂ ತಿಳಿಸಿವೆ.

‘ಇದೇ ಆರೋಪಿಗಳು ಹಲವರನ್ನು ವಂಚಿಸಿರುವ ಸಾಧ್ಯತೆ ಇದೆ. ಆರೋಪಿ ಲೀನಾ ಅವರನ್ನು ನಗರಕ್ಕೆ ಕರೆತಂದು ನ್ಯಾಯಾಲಯಕ್ಕೆ ಶನಿವಾರ ಹಾಜರುಪಡಿಸಲಾಗುವುದು. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಲಯನ್ನು ಕೋರಲಿದ್ದೇವೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.