ADVERTISEMENT

ಅಗರ ಗ್ರಾಮದಲ್ಲಿ ಚಿರತೆ ಸುಳಿದಾಟ

ಕುರಿಗಾಹಿಗಳಿಗೆ ಜೀವಭಯ: ಮನೆಯೊಂದರ ಕಾಂಪೌಂಡ್ ಹಾರಿಹೋದ ಚಿರತೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 21:43 IST
Last Updated 6 ಡಿಸೆಂಬರ್ 2022, 21:43 IST
ಚಿರತೆ
ಚಿರತೆ   

ಕೆಂಗೇರಿ: ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಆತಂಕ ಸೃಷ್ಟಿಸಿ ಮರೆಯಾಗಿದ್ದ ಚಿರತೆಯು ಬಿ.ಎಂ.ಕಾವಲ್ ಅರಣ್ಯ ವಲಯದ ಅಗರ ಗ್ರಾಮಕ್ಕೆ ಲಗ್ಗೆಯಿಟ್ಟಿದೆ.

ಚಿರತೆ ಕಂಡ ನಾಯಿಗಳು ಬೊಗಳಲು ಆರಂಭಿಸಿದ್ದವು. ನಾಯಿಗಳ ಚೀರಾಟ ಕೇಳಿ ತೋಟದ ಮನೆಯ ಆಳು ಸಿದ್ದಪ್ಪ ಮನೆ ಬಾಗಿಲು ತೆರದು ನೋಡಿದಾಗ ಚಿರತೆ ಮನೆಯ ಕಾಂಪೌಂಡ್ ಹಾರಿ ಹೋಗಿದೆ.

ಅಗರ ವ್ಯಾಪ್ತಿಯಲ್ಲಿ ನೂರಾರು ಎಕರೆ ಅರಣ್ಯ ಪ್ರದೇಶವಿದೆ. ಇಲ್ಲಿಗೆ ಬರುವ ಕುರಿಗಾಹಿಗಳಿಗೆ ಪ್ರಾಣಭಯ ಎದುರಾಗಿದೆ. ಕೈಯಲ್ಲಿ ಕುಡುಗೋಲು ಹಿಡಿದು ಕುರಿಗಳನ್ನು ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಕುರಿಗಾಹಿ ರಮೇಶ್ ಆತಂಕ ವ್ಯಕ್ತಪಡಿಸಿದರು.

ADVERTISEMENT

ಅಗರ ಕೆರೆ ಬಳಿಯೂ ಚಿರತೆ ಓಡಾಟ ನಡೆಸಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಸಿದ್ದಪ್ಪನಪಾಳ್ಯ, ಲಕ್ಷ್ಮೀಪುರ ಹಾಗೂ ತಾತಗುಣಿ ಅರಣ್ಯ ಪ್ರದೇಶದಲ್ಲೂ ಚಿರತೆ ಸಂಚರಿಸುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಜೀವ
ಹಾನಿಯಾಗುವ ಸಂಭವವಿದೆ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ರಂಗರಾಜು ಆತಂಕ ವ್ಯಕ್ತಪಡಿಸಿದರು.

ಬಿ.ಎಂ.ಕಾವಲ್ ಅರಣ್ಯ ವಲಯವು 1,380 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಈ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಸವಾಲಿನ ಕೆಲಸ ಎಂದೂ ಹೇಳಿದರು.

ಆರು ದಿನಗಳಿಂದ ಹೆಮ್ಮಿಗೆಪುರ, ಗಾಣಕಲ್, ಬನಶಂಕರಿ 6ನೇ ಹಂತ, ಕರಿಯನಪಾಳ್ಯ ಸುತ್ತಮತ್ತಲ ಪ್ರದೇಶದ ಜನರಲ್ಲಿ ತೀವ್ರ ಭಯ ಹುಟ್ಟಿಸಿದ್ದ ಚಿರತೆ ಸೋಮವಾರ ಮಧ್ಯರಾತ್ರಿ ಅಗರ ಗ್ರಾಮದ ಜಿ.ಆರ್. ಇಂಟರ್ ನ್ಯಾಷನಲ್ ಕಾಲೇಜು ಬಳಿಯ ತೋಟದ ಮನೆಯೊಂದರ ಬಳಿ ಸುಳಿದಾಡಿ ಹೋಗಿತ್ತು.

ಎರಡು ಮರಿಗಳೊಂದಿಗೆ ಚಿರತೆ ಪ್ರತ್ಯಕ್ಷ: ತೂಬಗೆರೆ (ದೊಡ್ಡಬಳ್ಳಾಪುರ): ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗುವ ರಸ್ತೆಯಲ್ಲಿ ಮಂಗಳವಾರ ಸಂಜೆ ಕೃಷ್ಣಮೂರ್ತಿ ಎಂಬುವರ ವಾಹನಕ್ಕೆ ಲಘುಮೇನಹಳ್ಳಿ ಕ್ರಾಸ್ ಬಳಿ ಚಿರತೆ ಎದುರಾಗಿದ್ದರಿಂದ ಆತಂಕಗೊಂಡ ಅವರು ಗ್ರಾಮಾಂತರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ‍ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.