‘ಕಾಡುವ ಕಿರಂ’ ಅಹೋರಾತ್ರಿ’ ಕಾರ್ಯಕ್ರಮ
ಬೆಂಗಳೂರು: ‘ಸಾಹಿತ್ಯ, ಕಾವ್ಯ ಮತ್ತು ಸಂಸ್ಕೃತಿ ಚಿಂತನೆಯನ್ನು ಕಾವ್ಯಾಸಕ್ತರಿಗೆ, ವಿದ್ಯಾರ್ಥಿಗಳಿಗೆ ಪಸರಿಸಿದ ಕಿ.ರಂ. ಜಂಗಮನಂತೆ ಬದುಕಿದರು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ಜನಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು ಆರ್ಟ್ ಫೌಂಡೇಷನ್ ಮತ್ತು ಕಿ.ರಂ. ಪ್ರಕಾಶನದ ಸಹಯೋಗದಲ್ಲಿ
ವಿಮರ್ಶಕ ಪ್ರೊ.ಕಿ.ರಂ.ನಾಗರಾಜ ಅವರ ನೆನಪಿನಲ್ಲಿ ಆಯೋಜಿಸಿದ್ದ ‘ಕಾಡುವ ಕಿ.ರಂ. ಅಹೋರಾತ್ರಿ ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕಿ.ರಂ. ಅವರು ಹೆಚ್ಚು ಬರೆಯದಿದ್ದರೂ ದಶಕಗಳ ಸಾಹಿತ್ಯಕ್ಕೆ ಬೇಕಾದ ಚಿಂತನೆ, ಹೊಸ ಹೊಳಹುಗಳನ್ನು ಬಿಟ್ಟು ಹೋಗಿದ್ದಾರೆ‘ ಎಂದರು.
ಕಲಾವಿದ ಎಂ.ಎಸ್ ಮೂರ್ತಿ ‘ಹಳಗನ್ನಡ, ಹೊಸಗನ್ನಡ ಸಾಹಿತ್ಯಗಳೆರಡನ್ನು ಸಮನ್ವಯಗೊಳಿಸಿ ಹೊಸ ಒಳನೋಟಗಳನ್ನು ನೀಡಿದವರು ಕಿ.ರಂ. ಅವರ ಚಿಂತನೆಗಳು ಇಂದಿಗೂ ಜೀವಂತ’ ಎಂದು ಬಣ್ಣಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್ ಕಾವ್ಯವಾಚನ ಮಾಡಿದರು. ಕಾರ್ಯಕ್ರಮದಲ್ಲಿ ‘ಕಾಡುವ ಕಿ.ರಂ. ಹೊಸ ಕವಿತೆ 2025’ ಪುಸ್ತಕ ಜನಾರ್ಪಣೆಗೊಳಿಸಲಾಯಿತು. ವಿವಿಧ ಕ್ಷೇತ್ರಗಳ ಗಣ್ಯರಿಗೆ ಕಿ.ರಂ. ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಲ್ಕೆರೆ ಶಿವಕುಮಾರ್ ಮತ್ತು ಸಂಗಡಿಗರು ಜನಪದ ಗಾಯನವನ್ನು ಪ್ರಸ್ತುತಪಡಿಸಿದರು
ಕಿ.ರಂ.ನಾಗರಾಜ ರಚನೆಯ ‘ನೀಗಿಕೊಂಡ’ ಸಂಸ ನಾಟಕ ಪ್ರದರ್ಶನಗೊಂಡಿತು. ನಂತರ ಅಹೋರಾತ್ರಿ ಚರ್ಚೆ, ಕವಿಗೋಷ್ಠಿ, ಜನಪದ ಕಾವ್ಯ ಗಾಯನ ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.