ADVERTISEMENT

ಹಾರಂಗಿ ಜಲಾಶಯವನ್ನು ಕೆಡವಿ ಹಾಕಿ: ಕೊಡವ ರಾಷ್ಟ್ರೀಯ ಕೌನ್ಸಿಲ್‌ ಆಗ್ರಹ

ಕೊಡಗಿನ ಪ್ರಾಕೃತಿಕ ದುರಂತಕ್ಕೆ ಈ ಅಣೆಕಟ್ಟೆಯೇ ಕಾರಣ: ಕೊಡವ ರಾಷ್ಟ್ರೀಯ ಕೌನ್ಸಿಲ್‌ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2018, 18:31 IST
Last Updated 15 ಸೆಪ್ಟೆಂಬರ್ 2018, 18:31 IST

ಬೆಂಗಳೂರು: ‘ಹಾರಂಗಿ ಜಲಾಶಯದ ಹಿನ್ನೀರಿನ ತೀವ್ರ ಒತ್ತಡದಿಂದಾಗಿಯೇ ವಾಯುವ್ಯ ಕೊಡಗು ಪ್ರದೇಶದಲ್ಲಿ ಭೂ, ಜಲ ಸ್ಫೋಟ ಉಂಟಾಗಿದೆ. ಹಾಗಾಗಿ ಅದನ್ನುಒಡೆದು ಹಾಕಬೇಕು’ ಎಂದು ಕೊಡವ ರಾಷ್ಟ್ರೀಯ ಕೌನ್ಸಿಲ್‌ ಆಗ್ರಹಿಸಿದೆ.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೌನ್ಸಿಲ್‌ನ ಅಧ್ಯಕ್ಷ ಎನ್‌.ಯು.ನಾಚಪ್ಪ, ‘ಕೊಡವ ಜಾನಪದ ನಿಧಿ ಮತ್ತು ನಾಗರಿಕತೆಯ ತೂಗುತೊಟ್ಟಿಲನ್ನೇ ನಿರ್ನಾಮ ಮಾಡಿದ ಹಾರಂಗಿ ಜಲಾಶಯ ಕೆಡವಿ ಹಾಕದಿದ್ದರೆ, ಮತ್ತೆ ವಿಪತ್ತುಗಳು ತಪ್ಪಿದ್ದಲ್ಲ’ ಎಂದು ಹೇಳಿದರು.

‘ನಿರಾಶ್ರಿತರಿಗೆ ಅವರ ಮೂಲ ಸ್ಥಳಗಳಲ್ಲಿಯೇ ಶಾಸನಬದ್ಧ ಪುನರ್‌ ವಸತಿ ಕಲ್ಪಿಸಬೇಕು.ಬದುಕು ಕಟ್ಟಿಕೊಳ್ಳಲು ₹30 ಸಾವಿರ ಕೋಟಿ ಆರ್ಥಿಕ ನೆರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಬೇಕು. ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿ ವಿಪತ್ತು ನಿರ್ವಹಣಾ ನಿಧಿಯಿಂದ ಆರ್ಥಿಕ ಸಹಾಯ ನೀಡಬೇಕು’ಎಂದು ಆಗ್ರಹಿಸಿದರು.

ADVERTISEMENT

‘ಪುನರ್‌ ವಸತಿ ಕಾರ್ಯಾರಂಭವಾಗಿ ಮುಗಿಯುವ ತನಕ 10 ವರ್ಷಗಳ ಕಾಲ ಸಂತ್ರಸ್ತರ ಜೀವನ ನಿರ್ವಹಣೆಗಾಗಿ ಬಾಡಿಗೆ ಮನೆಗಳಲ್ಲಿ ವಾಸಿಸಲು ಮತ್ತು ಜೀವನ ನಿರ್ವಹಣೆಗೆ ಪ್ರತ್ಯೇಕ ವಿಶೇ‌ಷ ಆರ್ಥಿಕ ಸಹಾಯ ನೀಡಬೇಕು.ವಿಪತ್ತು ನಿರ್ವಹಣಾ ಸಚಿವಾಲಯವನ್ನು ಸೃಜಿಸಬೇಕು’ ಎಂದು ಹೇಳಿದರು.

‘ನಿಜವಾದ ನೆರೆ ಸಂತ್ರಸ್ತರಿಗೆ ತಲುಪಬೇಕಾದ ಸೌಲಭ್ಯಗಳು ತಲುಪದೆ,ಕಾವೇರಿ ನದಿ ದಂಡೆಯಲ್ಲಿ ಅಕ್ರಮವಾಗಿ ನೆಲೆ ನಿಂತವರ ಪಾಲಾಗುತ್ತಿವೆ. ಕೆಲವರು ಇಲ್ಲಿಯೂ ಲಾಬಿ ನಡೆಸಿದ್ದಾರೆ. ಸರ್ಕಾರ ಕೈಗೊಂಡಿರುವ ಪರಿಹಾರ ಯೋಜನೆಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

‘ನಮ್ಮ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದಿದ್ದರೆ, ಕೊಡವ ಭೂಮಿಯನ್ನು ನಮಗೆ ಬಿಟ್ಟು ಕೊಡಿ. ನಮ್ಮ ನಾಡನ್ನು ನಾವೇ ಕಟ್ಟಿಕೊಳ್ಳುತ್ತೇವೆ.ಒಂದೇ ವರ್ಷದಲ್ಲಿ ಸಂತ್ರಸ್ತರಿಗೆ ಶಾಶ್ವತಪುನರ್‌ ವಸತಿ ನಿರ್ಮಿಸಿ ತೋರಿಸುತ್ತೇವೆ‌. ಇದೇ ಸೆ.21 ರಂದು ಮಡಿಕೇರಿಯಲ್ಲಿ ಬೃಹತ್‌ ರ‍್ಯಾಲಿ ನಡೆಸಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.