ADVERTISEMENT

148 ದಿನಗಳ ನಂತರ ಕೆ.ಆರ್. ಮಾರುಕಟ್ಟೆ ಕಾರ್ಯಾರಂಭ

ಷರತ್ತುಗಳನ್ನು ವಿಧಿಸಿ ಸೀಲ್‌ಡೌನ್ ವಾಪಸ್ ಪಡೆದ ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 18:24 IST
Last Updated 31 ಆಗಸ್ಟ್ 2020, 18:24 IST
ಕೆ.ಆರ್. ಮಾರುಕಟ್ಟೆ ಆವರಣ ಸ್ಯಾನಿಟೈಸ್ ಮಾಡುತ್ತಿರುವುದು –ಪ್ರಜಾವಾಣಿ ಚಿತ್ರ
ಕೆ.ಆರ್. ಮಾರುಕಟ್ಟೆ ಆವರಣ ಸ್ಯಾನಿಟೈಸ್ ಮಾಡುತ್ತಿರುವುದು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೊರೊನಾ ಸೋಂಕಿನ ಕಾರಣ ಲಾಕ್‌ಡೌನ್ ಆಗಿದ್ದ ಕೆ.ಆರ್‌. ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ಮಾರುಕಟ್ಟೆ ಪುನರ್ ಆರಂಭಕ್ಕೆ ಸಿದ್ಧತೆ ಭರದಿಂದ ನಡೆದಿದೆ. 148 ದಿನಗಳಿಂದ ವ್ಯಾಪಾರ ವಹಿವಾಟಿಲ್ಲದೆ ಕಂಗಾಲಾಗಿದ್ದ ವ್ಯಾಪಾರಿಗಳು, ಅಂಗಡಿ ಮುಂಗಟ್ಟುಗಳ ದೂಳು ತೆಗೆದು ಸಿಂಗರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಕೆ.ಆರ್. ಮಾರುಕಟ್ಟೆ ಒಂದರಲ್ಲೇ 2,200 ಅಂಗಡಿಗಳಿವೆ. ಹೂವು, ಹಣ್ಣು, ತರಕಾರಿ, ತೆಂಗಿನಕಾಯಿ, ಬಾಳೆ ಎಲೆ, ವೀಳ್ಯದೆಲೆ, ಕುಂಕುಮ, ಅಲ್ಯೂಮಿನಿಯಂ ಪಾತ್ರೆ, ಗ್ಯಾಸ್ ಸ್ಟವ್, ಸ್ಟೀಲ್ ಪಾತ್ರೆ, ‍ದಿನಸಿ ಅಂಗಡಿ, ಬಟ್ಟೆ, ಪೇಪರ್, ಪುಸ್ತಕ, ಪ್ಲಾಸ್ಟಿಕ್ ಅಂಗಡಿಗಳು, ಕಾಂಡಿಮೆಂಟ್‌ ಸ್ಟೋರ್‌ಗಳು, ಮೀನು, ಮಾಂಸದ ಅಂಗಡಿಗಳು ಇಲ್ಲಿವೆ.

ಈ ಎರಡೂ ಮಾರುಕಟ್ಟೆಗಳು 5 ತಿಂಗಳಿಂದ ಬಂದ್ ಆಗಿದ್ದರಿಂದ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಪುನರ್ ಆರಂಭಕ್ಕೆ ಬಿಬಿಎಂಪಿ ಅನುಮತಿ ನೀಡಿರುವುದು ವ್ಯಾಪಾರಿಗಳಲ್ಲಿ ಸಮಾಧಾನ ತಂದಿದೆ.

ADVERTISEMENT

ಮಾರುಕಟ್ಟೆಯ ಆವರಣ ಸ್ವಚ್ಛಗೊಳಿಸುವ ಕಾರ್ಯವನ್ನು ಬಿಬಿಎಂಪಿ ಸಿಬ್ಬಂದಿ ನಿರ್ವಹಿಸಿದರು. ರೋಗ ನಿರೋಧಕ ಸಿಂಪರಣೆ ಮಾಡಿದರು. ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟು ನಿರ್ವಹಿಸಲು ಮಾರ್ಕಿಂಗ್‌ಗಳನ್ನು ಮಾಡಿದರು.

ಪರಿಶೀಲನೆ: ಶಾಸಕ ಉದಯ ಬಿ.ಗರುಡಾಚಾರ್ ಮತ್ತು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರು ಮಾರುಕಟ್ಟೆಗೆ ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸಿದರು.

‘ಸೋಂಕು ಹರಡಬಹುದು ಎಂಬ ಕಾರಣಕ್ಕೆ ಮುಂದಾಲೋಚನೆಯಿಂದ ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ. ವ್ಯಾಪಾರ ನಡೆಸುವವರು ಮುಖಗವಸು ಧರಿಸಬೇಕು. ಆಗಾಗ ಸ್ಯಾನಿಟೈಸರ್ ಬಳಸಬೇಕು ಎಂಬ ಷರತ್ತುಗಳನ್ನು ವಿಧಿಸಿ ಸೀಲ್‌ಡೌನ್ ವಾಪಸ್ ಪಡೆಯಲಾಗಿದೆ’ ಎಂದು ಎನ್‌. ಮಂಜುನಾಥಪ್ರಸಾದ್ ಹೇಳಿದರು.

‘ಜುಲೈ ಮತ್ತು ಆಗಸ್ಟ್ ತಿಂಗಳಿಗೆ ಹೋಲಿಕೆ ಮಾಡಿದಾಗ ಜುಲೈನಲ್ಲಿ ಕೋವಿಡ್‌ನಿಂದ ಮರಣ ಹೊಂದಿದವರ ಪ್ರಮಾಣ ಶೇ 1.85 ಇತ್ತು. ಈಗ ಶೇ 1.53ಕ್ಕೆ ಇಳಿಕೆಯಾಗಿದೆ. ಪಾಸಿಟಿವಿಟಿ ಪ್ರಮಾಣ ಜುಲೈನಲ್ಲಿ ಶೇ 24ರಷ್ಟು ಇತ್ತು. ಈಗ ಶೇ 15ಕ್ಕೆ ಇಳಿದಿದೆ’ ಎಂದು ತಿಳಿಸಿದರು.

‘ಸುರಕ್ಷತಾ ದೃಷ್ಟಿಯಿಂದ 15 ಮಾರ್ಷಲ್‌ಗಳನ್ನು ನಿಯೋಜನೆ ಮಾಡಲಾಗಿದ್ದು, ನಿಯಮ ಉಲ್ಲಂಘಿಸದಂತೆ ಕಣ್ಗಾವಲು ವಹಿಸಲಿದ್ದಾರೆ. ₹3 ಕೋಟಿವೆಚ್ಚದಲ್ಲಿ ಕಟ್ಟಡಕ್ಕೆ ಅಗ್ನಿನಿರೋಧಕ ವ್ಯವಸ್ಥೆ ಮಾಡಲಾಗುತ್ತಿದ್ದು,ಅಲ್ಲಿ ತನಕಅಗ್ನಿಶಾಮಕ ದಳ ಇಲ್ಲಿ ಕಾರ್ಯ ನಿರ್ವಹಿಸಲಿದೆ’ ಎಂದು ವಿವರಿಸಿದರು.

ಬಾಡಿಗೆ ಮನ್ನಾಕ್ಕೆ ಮನವಿ

ವರ್ಷದ ಪ್ರಮುಖ ಐದು ಹಬ್ಬಗಳು ಮುಗಿದು ಹೋಗಿದ್ದು, ಮುಂದಿನ ದಿನಗಳು ಅಷ್ಟೇನೂ ಹರ್ಷದಾಯಕವಾಗಿಲ್ಲ ಎನ್ನುತ್ತಾರೆ ವರ್ತಕರು.

‘ಈ ವರ್ಷ ವ್ಯಾಪಾರಿಗಳು ಚೇತರಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಹೀಗಾಗಿ, ಮಳಿಗೆಗಳ ಒಂದು ವರ್ಷದ ತನಕ ಬಾಡಿಗೆ ಮನ್ನಾ ಮಾಡಲು ಮನವಿ ಮಾಡಿದ್ದೇವೆ’ ಎಂದು ಕೆ.ಆರ್‌. ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ದಿವಾಕರ್ ಹೇಳಿದರು.

‘ಸ್ವಚ್ಛಗೊಳಿಸುವ ಕೆಲಸ ಇನ್ನೂ ಬಾಕಿ ಇದೆ. ಬುಧವಾರದಿಂದ ಪೂರ್ಣಪ್ರಮಾಣದಲ್ಲಿ ಮಾರುಕಟ್ಟೆ ಕಾರ್ಯನಿರ್ವಹಿಸಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.