ADVERTISEMENT

ಕೆಆರ್‌ಎಸ್ ಪಕ್ಷದಿಂದ 13 ದಿನಗಳ ‘ಕನ್ನಡೋತ್ಸವ’ ಆಚರಣೆಗೆ ಸಿದ್ಧತೆ

ಮಲೆಮಹದೇಶ್ವರ ಬೆಟ್ಟದಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2022, 21:53 IST
Last Updated 31 ಅಕ್ಟೋಬರ್ 2022, 21:53 IST
   

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ (ಕೆಆರ್‌ಎಸ್) ಒಂದು ತಿಂಗಳ ಕಾಲ ಕನ್ನಡೋತ್ಸವದ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

‘ಕೆಆರ್‌ಎಸ್ ಪಕ್ಷದ ಅಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ
13 ದಿನಗಳ ಕಾಲ ರಾಜ್ಯದಾದ್ಯಂತ ಪ್ರವಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಕರ್ನಾಟಕ
ವನ್ನು ಏಕೀಕರಣ ಮಾಡಿದ ಮಹನೀಯರ ಜನ್ಮಭೂಮಿಗೆ ಭೇಟಿ ನೀಡಿ , ಅವರನ್ನು ಸ್ಮರಿಸಿ ಜನಜಾಗೃತಿ ಮೂಡಿಸಲಾಗುವುದು’ ಎಂದು ಪಕ್ಷದ ಕಾರ್ಯದರ್ಶಿ ಬಿ.ಎಸ್ ಮಲ್ಲಿಕಾರ್ಜುನ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು

‘ಈ ಯಾತ್ರೆಯ ವೇಳೆಯಲ್ಲಿ ಕನ್ನಡ ಭಾಷೆಯನ್ನು ಬದುಕಿನ ಹಾಗೂ ಜೀವನೋಪಾಯದ ಭಾಷೆ ಮಾಡಿಕೊಳ್ಳುವ ಕುರಿತು ಚರ್ಚೆ, ಸಂವಾದ ಮತ್ತು ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

ADVERTISEMENT

ರಾಜ್ಯದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ಕನ್ನಡ ಬಾರದ ಅಧಿಕಾರಿಗಳು ಮತ್ತು ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ನಾಡಿನ ವಿವಿಧೆಡೆ ಇರುವ ಆರ್ಥಿಕತೆಯ ಸಂಪನ್ಮೂಲಗಳು, ಭವಿಷ್ಯದ ಅವಕಾಶಗಳ ಅನ್ವೇಷಣೆ ಕುರಿತು ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.

‘ಈ ಕನ್ನಡೋತ್ಸವ ಯಾತ್ರೆಯನ್ನು ಮಂಟೇಸ್ವಾಮಿ ಮತ್ತು ಮಾದಪ್ಪರ ಮಲೆಮಹದೇಶ್ವರ ಬೆಟ್ಟದಿಂದ ಚಾಲನೆ ನೀಡಲಾಗುವುದು. ರಾಜ್ಯದಾದ್ಯಂತ ಸಂಚರಿಸಿ ಬೆಂಗಳೂರಿನಲ್ಲಿರುವ ಡಾ.ರಾಜ್‌ಕುಮಾರ್ ಅವರ ಸಮಾಧಿಗೆ ಬಂದು ಸಂಪನ್ನವಾಗಲಿದೆ’ ಎಂದು ಹೇಳಿದರು.

ರಾಜ್ಯ ಕಾರ್ಯದರ್ಶಿ ಬಿ.ಕೆ. ಪ್ರಸನ್ನ, ಸಂಘಟನಾ ಕಾರ್ಯದರ್ಶಿ ಗಂಗಾಧರ್ ಕರಿಕರೆ ಎಲ್. ಜೀವನ್, ಪ್ರವೀಣ್ ಭೈರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.