ADVERTISEMENT

17 ಷರತ್ತು ಪಾಲಿಸಲು ಸೂಚನೆ: ಕೆಎಸ್‌ಸಿಎಗೆ ಪತ್ರ ಬರೆದ ಪೊಲೀಸ್ ಇಲಾಖೆ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ(ಕೆಎಸ್‌ಸಿಎ) ಪತ್ರ ಬರೆದ ಪೊಲೀಸ್ ಇಲಾಖೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 23:30 IST
Last Updated 22 ಆಗಸ್ಟ್ 2025, 23:30 IST
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ನೋಟ 
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ನೋಟ    

ಬೆಂಗಳೂರು: ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಳೆದ ಜೂನ್‌ನಲ್ಲಿ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ (ಆರ್‌ಸಿಬಿ) ವಿಜಯೋತ್ಸವದ ವೇಳೆ ನಡೆದಿದ್ದ ಕಾಲ್ತುಳಿತ ಘಟನೆಯ ಬಳಿಕ ಎಚ್ಚೆತ್ತಿರುವ ನಗರ ಪೊಲೀಸರು, ಈ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಮತ್ತೆ ಆಯೋಜಿಸಬೇಕಿದ್ದರೆ 17 ಷರತ್ತು ಪಾಲಿಸುವಂತೆ ಕಟ್ಟಪ್ಪಣೆ ವಿಧಿಸಿದ್ದಾರೆ.

ಜಿಲ್ಲಾಡಳಿತ, ನಗರ ಪೊಲೀಸರು, ಗುಪ್ತಚರ ವಿಭಾಗ, ಅಗ್ನಿಶಾಮಕ ದಳ ಸೇರಿದಂತೆ ಹಲವು ಇಲಾಖೆಗಳು ಸೇರಿಕೊಂಡು ಷರತ್ತು ರೂಪಿಸಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ(ಕೆಎಸ್‌ಸಿಎ) ಪತ್ರ ಬರೆದಿದ್ದಾರೆ. 

ಅಂತರರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್ ಪಂದ್ಯಾವಳಿ ಆಯೋಜನೆಗೂ ಮೊದಲು ಕ್ರೀಡಾಂಗಣವನ್ನು ಮರುಮೌಲ್ಯಮಾಪನ ಮಾಡಬೇಕು. ಪಂದ್ಯ ಆಯೋಜಿಸಲು ಯೋಗ್ಯವೆಂದು ಘೋಷಿಸುವ ಮೊದಲು 17 ಷರತ್ತುಗಳನ್ನು ಪಾಲಿಸಿ ಎಂದು ಕೆಎಸ್‌ಸಿಎಗೆ ಪೊಲೀಸರು ಸೂಚನೆ ನೀಡಿದ್ದಾರೆ.   

ADVERTISEMENT

ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದರು. ಈ ಘಟನೆಯ ಬಳಿಕ ಕ್ರೀಡಾಂಗಣದಲ್ಲಿ ಯಾವುದೇ ಕ್ರಿಕೆಟ್‌ ಪಂದ್ಯಕ್ಕೂ ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ. ಈ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಮಹಾರಾಜ ಟ್ರೋಫಿಯ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯನ್ನು ಮೈಸೂರಿಗೆ ಸ್ಥಳಾಂತರಿಸಲಾಗಿತ್ತು.

ಏನೇನು ಷರತ್ತುಗಳು?

ಕ್ರೀಡಾಂಗಣವು ನಗರದ ಕೇಂದ್ರ ಭಾಗದಲ್ಲಿದೆ. ಕ್ರೀಡಾಂಗಣದ ಸುತ್ತಮುತ್ತ ಪ್ರಮುಖ ರಸ್ತೆಗಳಿದ್ದು, ವಾಹನಗಳ ನಿಲುಗಡೆಗೆ ನಿಗದಿತ ಸ್ಥಳವಿಲ್ಲ. ಪಾರ್ಕಿಂಗ್‌ ಸೌಲಭ್ಯ ಒದಗಿಸಬೇಕು. ಪ್ರೇಕ್ಷಕರಿಗೆ ಪ್ರತ್ಯೇಕ ಮಾರ್ಗ ಕಲ್ಪಿಸಬೇಕು. ಎಲ್ಲ ಪ್ರವೇಶ ದ್ವಾರಗಳಲ್ಲೂ ಬ್ಯಾಗ್ ಸ್ಕ್ಯಾನರ್‌ ಅಳವಡಿಸಬೇಕು ಎಂದು ಷರತ್ತು ವಿಧಿಸಲಾಗಿದೆ.

ಕ್ರಿಕೆಟ್‌ ಪಂದ್ಯಾವಳಿ ಆಯೋಜಿಸಲು ಕೆಎಸ್‌ಸಿಎ ಹಾಗೂ ಫ್ರಾಂಚೈಸಿಗಳು ಪೊಲೀಸ್ ಪರಿಶೀಲನಾ ಪ್ರಮಾಣಪತ್ರವನ್ನು ಪಡೆಯಬೇಕು. ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕ ಪ್ರವೇಶ ದ್ವಾರ ನಿರ್ಮಿಸಬೇಕು. ಯಾವುದೇ ಸಮಸ್ಯೆಗಳು ಆಗದಂತೆ ನಿಗಾ ವಹಿಸಬೇಕು. ಪ್ರೇಕ್ಷಕರು ಬರುವುದಕ್ಕೂ ಮುನ್ನವೇ ಸ್ಥಳದಲ್ಲಿ ವೈದ್ಯರು, ನರ್ಸ್ ಹಾಗೂ ಆಂಬುಲೆನ್ಸ್‌ಗಳು ಇರುವಂತೆ ನೋಡಿಕೊಳ್ಳಬೇಕು. ಆಟಗಾರರಿಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರದ ವ್ಯವಸ್ಥೆ ಮಾಡಬೇಕು. ಅಗ್ನಿ ನಂದಕ ಉಪಕರಣ ಅಳವಡಿಸಬೇಕು. ಪ್ರೇಕ್ಷಕರ ಮೇಲೆ ನಿಗಾ ಇಡಲು ವಿಶೇಷ ತಂತ್ರಜ್ಞಾನ ಬಳಕೆ ಮಾಡಬೇಕು. ಕ್ರೀಡಾಂಗಣದ ಸುತ್ತಲೂ ಇರುವ ಗೇಟ್‌ಗಳ ಗಾತ್ರ ಹೆಚ್ಚಿಸಬೇಕು ಎಂದು ಸೂಚಿಸಲಾಗಿದೆ.

ನಿವೃತ್ತ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹಾ ಆಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಕ್ರೀಡಾಂಗಣದಲ್ಲಿ ಮೂಲಸೌಕರ್ಯ ಮತ್ತು ಸುರಕ್ಷತಾ ಕ್ರಮಗಳ ಕೊರತೆ ಇದೆ ಎಂದು ಉಲ್ಲೇಖವಾಗಿತ್ತು. ಪೊಲೀಸರು ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗಲೂ ಲೋಪಗಳು ಪತ್ತೆ ಆಗಿದ್ದವು. ಎಲ್ಲ ಲೋಪಗಳನ್ನು ಸರಿಪಡಿಸಿ ಸೌಲಭ್ಯ ಕಲ್ಪಿಸುವಂತೆ ಕೆಎಸ್‌ಸಿಎಗೆ ಪೊಲೀಸ್ ಇಲಾಖೆ ಪತ್ರ ಬರೆದಿದೆ. 15 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆಯೂ ಸೂಚಿಸಿದೆ ಎಂದು ಗೊತ್ತಾಗಿದೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ನೋಟ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.