ಬೆಂಗಳೂರು: ‘ಎಂ.ಚಿನ್ನಸ್ವಾಮಿ ಕ್ರೀಡಾಂಗಣವು ಅಗ್ನಿ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಂಡಿಲ್ಲ. ಆದರೂ ವಿದ್ಯುತ್ ಸಂಪರ್ಕ ನೀಡಲಾಗಿದೆ’ ಎಂಬ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಈ ಸಂಬಂಧ ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆಯನ್ನು (ಬೆಸ್ಕಾಂ) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
‘ಈ ತಪ್ಪಿಗೆ ಬೆಸ್ಕಾಂ ಅನ್ನೇ ಸಂಪೂರ್ಣವಾಗಿ ಹೊಣೆ ಮಾಡಲಾಗುವುದು’ ಎಂದು ಕಟುವಾಗಿ ಎಚ್ಚರಿಸಿದೆ. ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಜಾರಿಗೊಳಿಸಿರುವ ನೋಟಿಸ್ ಪ್ರಶ್ನಿಸಿ ‘ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್’ (ಕೆಎಸ್‌ಸಿಎ) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ನ್ಯಾಯಪೀಠ ‘ಅಗ್ನಿ ಸುರಕ್ಷತೆಯ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಂಡಿಲ್ಲ ಎಂದು ಗೊತ್ತಿದ್ದರೂ ವಿದ್ಯುತ್ ಸಂಪರ್ಕ ಕೊಟ್ಟಿದ್ದು ಹೇಗೆ? ಸರ್ಕಾರವನ್ನು ಕೇಳದೇ ನಿಮ್ಮಷ್ಟಕ್ಕೆ ನೀವೇ ವಿದ್ಯುತ್ ಸಂಪರ್ಕ ಕೊಟ್ಟುಬಿಟ್ಟರೆ ನ್ಯಾಯಾಲಯ ಸುಮ್ಮನಿರುವುದಿಲ್ಲ. ಈಗಾಗಲೇ ಆಗಿರುವ ಅನಾಹುತವೇ ಸಾಕಷ್ಟಿದೆ. ಮತ್ತೇನಾದರೂ ಅವಘಡ ಸಂಭವಿಸಿದರೆ ಅದಕ್ಕೆ ಯಾರು ಹೊಣೆ?’ ಎಂದು ಬೆಸ್ಕಾಂ ವಿರುದ್ಧ ಕಿಡಿ ಕಾರಿತು.
ಕೆಲಕಾಲ ವಿಚಾರಣೆ ನಡೆಸಿದ ನ್ಯಾಯಪೀಠ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ಬೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಗ್ನಿ ಸುರಕ್ಷತೆ ಮತ್ತು ತುರ್ತು ಸೇವೆಗಳ ಮಹಾ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ಜುಲೈ 15ಕ್ಕೆ ಮುಂದೂಡಿತು. ‘ಸ್ಟೇಡಿಯಂಗೆ 2011ರ ಜುಲೈ 7ರಂದು ನೀಡಲಾದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕು’ ಎಂದು ಅಗ್ನಿ ಸುರಕ್ಷತೆ ಮತ್ತು ತುರ್ತು ಸೇವೆಗಳ ಇಲಾಖೆ ಮಹಾ ನಿರ್ದೇಶಕರು 2025ರ ಜೂನ್ 10ರಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದರು. ಇದರನ್ವಯ ಜೂನ್ 12ರಂದು ಬೆಸ್ಕಾಂ ಕೆಎಸ್‌ಸಿಎಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಬಗ್ಗೆ ನೋಟಿಸ್ ಜಾರಿಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.