ADVERTISEMENT

ಕೆಎಸ್‌ಡಿಎಲ್‌ ಪ್ರಕರಣ: ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 20:22 IST
Last Updated 9 ಮಾರ್ಚ್ 2023, 20:22 IST

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತನಲ್ಲಿ (ಕೆಎಸ್‌ಡಿಎಲ್) ನಡೆದಿದೆ ಎನ್ನುವ ಭ್ರಷ್ಟಾಚಾರದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆಗೊಳಪಡಿಸಬೇಕು ಎಂದು ಸರ್ಕಾರಿ ಸಾಬೂನು ಕಾರ್ಖಾನೆ ಕಾರ್ಮಿಕರ ಸಂಘ, ಕೆಎಸ್‌ಡಿಎಲ್‌ ಸಿಬ್ಬಂದಿ ಮತ್ತು ಅಧಿಕಾರಿಗಳ ಸಂಘ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಸಂಘಗಳು ಒತ್ತಾಯಿಸಿವೆ.

‘ಕೆಎಸ್‌ಡಿಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಜಿ.ಆರ್. ಶಿವಶಂಕರ್ ಕಚ್ಚಾ ವಸ್ತುಗಳ ಖರೀದಿಯಲ್ಲಿ ಅಕ್ರಮವಾಗಿದೆ ಮತ್ತು ಸಾಬೂನು ಗುಣಮಟ್ಟದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕ ಸಾಬೂನು ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಹುನ್ನಾರದ ಹಿಂದೆ ಇವರು ಕಾರ್ಯನಿರ್ವಹಿಸುತ್ತಿರುವ ಸಂಶಯವಿದೆ. 1991 ರಿಂದ ನಿರಂತರವಾಗಿ ಕೆಎಸ್‌ಡಿಎಲ್ ಕಾರ್ಖಾನೆಯ ಬಗ್ಗೆ ನಿರಂತರವಾಗಿ ಆರೋಪ ಮಾಡುತ್ತಾ ಕಾರ್ಖಾನೆಯ ಘನತೆ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಕಾರ್ಮಿಕ ಮುಖಂಡ ಮೈಕಲ್‌ ಫರ್ನಾಂಡಿಸ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೆಎಸ್‌ಡಿಎಲ್‌ನ 107 ವರ್ಷಗಳ ಸಾಬೂನು ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಪ್ರಯತ್ನಗಳು ನಡೆಯುತ್ತಿದ್ದು, ಇದಕ್ಕೆ ಅವಕಾಶ ನೀಡಿಲ್ಲ. ಇಲ್ಲಿ ಉತ್ಪಾದಿಸುವ ಉತ್ಪನ್ನಗಳಿಗೆ ಧಕ್ಕೆ ತರುವ ಕೆಲಸವಾಗುತ್ತಿದೆ. ಸಾರ್ವಜನಿಕ ಉದ್ದಿಮೆಯನ್ನು ಉಳಿಸಲು ಎಂತಹ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ’ ಎಂದರು.

ADVERTISEMENT

ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಲೋಕೇಶ್ ಮಾತನಾಡಿ, ‘ಶಿವಶಂಕರ್ ಆರೋಪಗಳು ಆಧಾರರಹಿತ. ಇಂತಹ ಅಪಪ್ರಚಾರಗಳಿಂದ ಸಂಸ್ಥೆಯ ಉತ್ಪನ್ನಗಳ ವರ್ಚಸ್ಸಿಗೆ ಮಸಿ ಬಳಿಯುವ ಕೆಲಸವಾಗುತ್ತಿದೆ. ಇತ್ತೀಚಿಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ದೀರ್ಘಕಾಲದಿಂದ ಮೈಸೂರು ಸ್ಯಾಂಡಲ್ ಸೋಪ್ ಬಳಸುತ್ತಿದ್ದು, ಇದೀಗ ಸೋಪ್ ಬಳಕೆಗೆ ಹಿಂಜರಿಯುತ್ತಿದ್ದೇನೆ ಎಂದು ಹೇಳಿರುವುದು ಸರಿಯಲ್ಲ. ಇದರಿಂದ ಉತ್ಪನ್ನಗಳ ಮೇಲಿನ ಜನರ ವಿಶ್ವಾಸ ಕಡಿಮೆಯಾಗುತ್ತದೆ’ ಎಂದರು.

ಎಸ್.ಸಿ-ಎಸ್.ಟಿ ನೌಕರರ ಸಂಘದ ಕಾರ್ಯಾಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ಎಚ್.ಎಂ. ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.