ADVERTISEMENT

ಬಿಎಂಟಿಸಿ ಪ್ರಯಾಣಿಕರಿಗೆ ದಿನದ ಪಾಸ್ ಕಿರಿಕಿರಿ

₹10 ದರ ಇರುವ ದೂರಕ್ಕೂ ₹70 ಪಾವತಿಸುವ ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 21 ಮೇ 2020, 22:13 IST
Last Updated 21 ಮೇ 2020, 22:13 IST

ಬೆಂಗಳೂರು: ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆ ಇದ್ದರೂ ಪ್ರಯಾಣಿಕರ ಸಂಖ್ಯೆ ಗುರುವಾರ ವಿರಳವಾಗಿತ್ತು. ದಿನದ ಪಾಸ್ ಪಡೆದು ಪ್ರಯಾಣಿಸಬೇಕಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬಸ್ ಹತ್ತುವ ಮುನ್ನ ಪ್ರಯಾಣಿಕರು ₹70 ಪಾವತಿಸಿ ದಿನದ ಪಾಸ್ ಪಡೆಯಬೇಕು. ₹10 ದರ ಇರುವಷ್ಟು ದೂರಕ್ಕೆ ಪ್ರಯಾಣ ಮಾಡಿದರೂ ₹70 ಪಾವತಿಸುವುದು ಅನಿವಾರ್ಯವಾಗಿದೆ.

‘ಮೆಜೆಸ್ಟಿಕ್‌ನಿಂದ ರಾಜಾಜಿನಗರಕ್ಕೆ ₹20 ದರ ಇದೆ. ಪಾಸ್ ಪಡೆಯಲು ₹70 ಪಾವತಿಸಬೇಕಿದೆ. ಎರಡು ತಿಂಗಳಿಂದ ದುಡಿಮೆ ಇಲ್ಲದೆ ಮನೆಯಲ್ಲೇ ಕುಳಿತಿದ್ದೇವೆ. ಈಗ ಬಿಎಂಟಿಸಿ ನಮ್ಮ ಜೇಬಿಗೆ ಕತ್ತರಿ ಹಾಕಿದರೆ ಏನು ಮಾಡುವುದು’ ಎಂದು ಪ್ರಯಾಣಿಕ ವೆಂಕಟೇಶ್ ಪ್ರಶ್ನೆ ಮಾಡಿದರು.

ADVERTISEMENT

‘ಟಿಕೆಟ್ ಪಡೆದು ಪ್ರಯಾಣಿಸಲು ಸರ್ಕಾರ ಅನುಮತಿ ನೀಡಬೇಕು. ಇಲ್ಲದಿದ್ದರೆ ಬಡವರು ಮತ್ತಷ್ಟು ತೊಂದರೆಗೆ ಸಿಲುಕಲಿದ್ದಾರೆ’ ಎಂದು ಅವರು ಹೇಳಿದರು.

ಮೆಜೆಸ್ಟಿಕ್ ನಿಲ್ದಾಣದಲ್ಲಿ ಗುರುವಾರ ಬಸ್‌ಗಳಿದ್ದರೂ, ಪ್ರಯಾಣಿಕರು ಕಡಿಮೆ ಸಂಖ್ಯೆಯಲ್ಲಿ ಇದ್ದರು. ಪಾಸ್ ಪಡೆಯುವ ಕಿರಿಕಿರಿ ಕಾರಣಕ್ಕೆ ಜನ ಬಸ್ ಹತ್ತಲು ಹಿಂದೇಟು ಹಾಕುತ್ತಿದ್ದಾರೆ.

‘ಸರ್ಕಾರದ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಟಿಕೆಟ್ ವಿತರಿಸಿದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ. ಪಾಸ್ ದರ ಪಾವತಿಸಲು ಕಷ್ಟ ಎಂಬ ಕಾರಣಕ್ಕಾದರೂ ಜನ ಮನೆಯಲ್ಲೇ ಇನ್ನಷ್ಟು ದಿನ ಉಳಿಯಲಿ ಎಂಬುದು ಸರ್ಕಾರದ ಉದ್ದೇಶ’ ಎಂಬುದು ಬಿಎಂಟಿಸಿ ಅಧಿಕಾರಿಗಳ ಸ್ಪಷ್ಟನೆ.

ಕಡಿಮೆಯಾದ ಜನಸಂದಣೆ

ಬಸ್ ಸಂಚಾರ ಆರಂಭಿಸಿದ ಮೊದಲೆರಡು ದಿನ ಬಸ್ ಹತ್ತಲು ಇದ್ದ ಜನಸಂದಣಿ ಈಗ ಕಡಿಮೆಯಾಗಿದೆ. ಆದರೂ, ಗುರುವಾರ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 85,373 ಮಂದಿ ಪ್ರಯಾಣ ಮಾಡಿದ್ದಾರೆ.

ನಗರದ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಬೆಳಿಗ್ಗೆ ಸ್ವಲ್ಪ ಜನದಟ್ಟಣೆ ಇತ್ತು. ಮಧ್ಯಾಹ್ನದ ವೇಳೆಗೆ ಜನರೇ ಇಲ್ಲದೆ ಸಿಬ್ಬಂದಿ ಕಾದು ಕುಳಿತಿದ್ದರು. ಸಂಜೆ ನಂತರ ಮತ್ತೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಯಿತು.

ಮೊದಲ ದಿನ 1,606 ಬಸ್‌ಗಳಲ್ಲಿ 53,506 ಜನ ಪ್ರಯಾಣ ಮಾಡಿದ್ದು, ಎರಡನೇ ದಿನವಾದ ಬುಧವಾರ 2,633 ಬಸ್‌ಗಳಲ್ಲಿ 81,596 ಜನರು ಪ್ರಯಾಣಿಸಿದ್ದರು. ಗುರುವಾರ 2,732 ಬಸ್‌ಗಳು ರಾಜ್ಯದ ವಿವಿಧೆಡೆ ಸಂಚರಿಸಿವೆ. ಬೆಂಗಳೂರಿನಿಂದಲೇ 847 ಬಸ್‌ಗಳು ವಿವಿಧ ನಗರಗಳಿಗೆ ಕಾರ್ಯಾಚರಣೆ ಮಾಡಿವೆ. ಶುಕ್ರವಾರ 3 ಸಾವಿರ ಬಸ್‌ಗಳ ಕಾರ್ಯಾಚರಣೆ ನಡೆಸಲು ಕೆಎಸ್‌ಆರ್‌ಟಿಸಿ ಉದ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.