ADVERTISEMENT

ಕಾಂಕ್ರಿಟ್ ಮಿಶ್ರಣ ಮಾಡುವಾಗ ಅವಘಡ: ಯಂತ್ರದೊಳಗೆ ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 20:08 IST
Last Updated 1 ಆಗಸ್ಟ್ 2019, 20:08 IST

ಬೆಂಗಳೂರು: ರೆಡಿಮಿಕ್ಸ್ ಕಾಂಕ್ರಿಟ್ ಮಿಶ್ರಣ ಯಂತ್ರದೊಳಗೆ ಕೆಲಸ ಮಾಡುತ್ತಿದ್ದ ವೇಳೆ ಮೈ ಮೇಲೆ ಮರಳು ಸುರಿದಿದ್ದರಿಂದ ಕಾರ್ಮಿಕ ನಾರಾಯಣ (20) ಎಂಬುವರು ಮೃತಪಟ್ಟಿದ್ದಾರೆ.

ಆಂಧ್ರಪ್ರದೇಶದ ನಾರಾಯಣ, ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಇಂದಿರಾನಗರದ ಸುರಂಜನದಾಸ್ ರಸ್ತೆಯಲ್ಲಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲೇ ಈ ಅವಘಡ ಸಂಭವಿಸಿದೆ.

‘ಎಸ್‌ಎಸ್‌ಸಿ ಪ್ರಾಜೆಕ್ಟ್‌’ ಕಂಪನಿ ಗುತ್ತಿಗೆ ಪಡೆದು ನಿರ್ಮಿಸುತ್ತಿದ್ದ ಕಟ್ಟಡದ ಕಾಂಕ್ರಿಟ್ ಕೆಲಸ ನಡೆಯುತ್ತಿತ್ತು. ಜುಲೈ 30ರಂದು ರೆಡಿಮಿಕ್ಸ್ ಕಾಂಕ್ರಿಟ್ ಮಿಶ್ರಣ ಯಂತ್ರದೊಳಗೆ ನಾರಾಯಣ ಕೆಲಸ ಮಾಡುತ್ತಿದ್ದರು. ಅದನ್ನು ಗಮನಿಸದ ಚಾಲಕ ವೆಂಕಟೇಶ್, ಜೆಸಿಬಿಯಿಂದ ಯಂತ್ರದೊಳಗೆ ಮರಳು ಸುರಿದಿದ್ದ. ಈ ಬಗ್ಗೆ ಪ್ರತ್ಯಕ್ಷ ದರ್ಶಿಯೊಬ್ಬರು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಮೈ ಮೇಲೆ ಮರಳು ಬಿದ್ದಿದ್ದ ರಿಂದಾಗಿ ನಾರಾಯಣ ಅವರು ಯಂತ್ರದೊಳಗೇ ಸಿಲುಕಿಕೊಂಡಿದ್ದರು. ಸಹ ಕಾರ್ಮಿಕರು ಅವರನ್ನು ಮರಳಿನಿಂದ ಹೊರತೆಗೆದು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು, ಮರಳಿನಲ್ಲೇ ಉಸಿರುಗಟ್ಟಿ ನಾರಾಯಣ ಮೃತಪಟ್ಟಿರುವುದಾಗಿ ಹೇಳಿದರು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಘಟನೆ ಸಂಬಂಧ ನಾರಾಯಣ ಅವರ ಅಣ್ಣ ನರಸಪ್ಪ ದೂರು ನೀಡಿದ್ದಾರೆ. ಜೆಸಿಬಿ ಚಾಲಕ ವೆಂಕಟೇಶ್, ‘ಎಸ್‌ಎಸ್‌ಸಿ ಪ್ರಾಜೆಕ್ಟ್‌’ ಕಂಪನಿ ವ್ಯವಸ್ಥಾಪಕ ವಿ.ಪಿ.ಪ್ರಸಾದ್, ಸೈಟ್ ಇಂಜಿನಿಯರ್ ಕೆ. ಗೋವಿಂದರಾಜ್, ವ್ಯವಸ್ಥಾಪಕ ನಿರ್ದೇಶಕ ಎಸ್.ಸುನಂದ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.