ADVERTISEMENT

ಪ್ರಿಯಕರನ ಜತೆಗೂಡಿ ಪತಿಯ ಕುತ್ತಿಗೆ ಬಿಗಿದಳು!

ತಾವೇ ಕೊಂದು ದರೋಡೆಕೋರರ ಕೃತ್ಯವೆಂದು ಬಿಂಬಿಸಲು ಹೊರಟಿದ್ದರು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2018, 20:17 IST
Last Updated 22 ಸೆಪ್ಟೆಂಬರ್ 2018, 20:17 IST
ಅಪ್ಪು, ಮಮತಾ
ಅಪ್ಪು, ಮಮತಾ   

ಬೆಂಗಳೂರು: ಪ್ರಿಯಕರನ ಜತೆ ಸೇರಿ ಪತಿಯ ಕುತ್ತಿಗೆ ಬಿಗಿದು ಕೊಂದ ಮಹಿಳೆ, ‘ಹಣಕ್ಕಾಗಿ ದರೋಡೆಕೋರರು ಗಂಡನನ್ನು ಕೊಂದಿದ್ದಾರೆ’ ಎಂದು ನಾಟಕವಾಡಿದ್ದರು. ಆದರೆ, ಮೊಬೈಲ್‌ ಕರೆ ವಿವರ (ಸಿಡಿಆರ್) ನೀಡಿದ ಸುಳಿವು ಇಬ್ಬರಿಗೂ ಜೈಲಿನ ದಾರಿ ತೋರಿಸಿದೆ.

ವೀರಸಾಗರ ಗ್ರಾಮದಿಂದ ರಾಮಗೊಂಡನಹಳ್ಳಿಗೆ ಹೋಗುವ ರಸ್ತೆಯಲ್ಲಿ ಸೆ.19ರಂದು ಸಗಾಯ್‌ ರಾಜ್ ಅವರ ಮೃತದೇಹ ಪತ್ತೆಯಾಗಿತ್ತು. ಕುತ್ತಿಗೆ ಮೇಲೆ ಗಾಯದ ಗುರುತು ಇದ್ದುದರಿಂದ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಯಲಹಂಕ ಉಪನಗರ ಪೊಲೀಸರು, ಮೃತರ ಪತ್ನಿ ಮಮತಾ (23) ಹಾಗೂ ಅಪ್ಪು (24) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಬಿಬಿಎಂಪಿ ಪೌರಕಾರ್ಮಿಕನಾದ ಅಪ್ಪು, ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಯಶವಂತಪುರದಲ್ಲಿ ನೆಲೆಸಿದ್ದಾನೆ. ಮಮತಾ ಕೂಡ ಎಂಟು ವರ್ಷಗಳ ಹಿಂದೆ ಅದೇ ಪ್ರದೇಶದಲ್ಲಿದ್ದರು. ಇಬ್ಬರೂ ಪ್ರೀತಿಸುತ್ತಿದ್ದ ವಿಚಾರ ತಿಳಿದ ಮಮತಾ ಪೋಷಕರು, ಅವರನ್ನು ವೀರಸಾಗರ ಗ್ರಾಮದ ಸಗಾಯ್ ಜತೆ ಮದುವೆ ಮಾಡಿದ್ದರು. ಆದರೂ, ಮಮತಾ–ಅಪ್ಪು ನಡುವಿನ ಸಲುಗೆ ಮುಂದುವರಿದಿತ್ತು ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

‘ನೀನು ಯಶವಂತಪುರದ ಕೊಳೆಗೇರಿಯಲ್ಲಿ ನೆಲೆಸಿದ್ದವಳು. ನಿನಗೆ ಅಲ್ಲಿನ ಕೆಲ ಪುರುಷರ ಜತೆ ಸಂಪರ್ಕವಿತ್ತು ಎಂಬ ವಿಚಾರ ನನಗೆ ಇತ್ತೀಚೆಗೆ ಗೊತ್ತಾಯಿತು. ಅವರೆಲ್ಲ ಈಗಲೂ ಸಂಪರ್ಕದಲ್ಲಿ ಇದ್ದಾರೆಯೇ’ ಎಂದು ಪತಿ ಪದೇ ಪದೇ ಪ್ರಶ್ನಿಸುತ್ತಿದ್ದರು. ಅದೇ ವಿಚಾರ ತೆಗೆದು ಮನೆಯಲ್ಲಿ ನಿತ್ಯ ಗಲಾಟೆ ಮಾಡುತ್ತಿದ್ದರು. ಇದರಿಂದ ಕೋಪ ಬಂದು ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಾಗಿ ಮಮತಾ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.

‘ಗಂಡನನ್ನು ಕೊಂದರೆ ನಾವಿಬ್ಬರೂ ಚೆನ್ನಾಗಿರಬಹುದು’ ಎಂದು ಮಮತಾ ಅಪ್ಪುಗೆ ಹೇಳಿದ್ದರು. ಹೀಗಾಗಿ, ಆತ ಕೃತ್ಯಕ್ಕೆ ಒಪ್ಪಿಕೊಂಡಿದ್ದ.

ಕುಡಿಸಿ ಕೊಂದರು: ಮೊದಲು ಮದ್ಯವ್ಯಸನಿಯಾಗಿದ್ದ ಸಗಾಯ್, ಪತ್ನಿಯ ಮಾತು ಕೇಳಿ ಆರು ತಿಂಗಳಿನಿಂದ ಕುಡಿತ ಬಿಟ್ಟಿದ್ದರು. ಆದರೆ, ಸೆ.18ರ ರಾತ್ರಿ ಅಪ್ಪುಗೆ ಕರೆ ಮಾಡಿದ್ದ ಮಮತಾ, ಪತಿಗೆ ಕಂಠಪೂರ್ತಿ ಕುಡಿಸಿ ಮನೆ ಹತ್ತಿರ ಕರೆದುಕೊಂಡು ಬರುವಂತೆ ಸೂಚಿಸಿದ್ದರು.

ಸಂಬಂಧಿಕರ ಮದುವೆ ಸಮಾರಂಭಕ್ಕೆ ಹೋಗಬೇಕೆಂದು ಸುಳ್ಳು ಹೇಳಿ ಸ್ನೇಹಿತನಿಂದ ಕಾರು ಪಡೆದುಕೊಂಡು ಬಂದಿದ್ದ ಅಪ್ಪು, ಅದರಲ್ಲೇ ಹೋಗಿ ಸಗಾಯ್‌ ಅವರನ್ನು ಭೇಟಿಯಾಗಿದ್ದ. ‘ಅಪರೂಪಕ್ಕೆ ಸಿಕ್ಕಿದ್ದೀರಾ. ಬನ್ನಿ ಪಾರ್ಟಿ ಮಾಡೋಣ’ ಎಂದು ಬಾರ್‌ಗೆ ಕರೆದುಕೊಂಡು ಹೋಗಿ ಕಂಠಪೂರ್ತಿ ಕುಡಿಸಿದ್ದ. ಅವರು ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆಯೇ ಕಾರಿನಲ್ಲಿ ಕೂರಿಸಿಕೊಂಡು ಸಂಭ್ರಮ್ ಕಾಲೇಜು ಬಳಿ ಬಂದಿದ್ದ. ಅಲ್ಲಿಗೆ ಮಮತಾ ಅವರನ್ನೂ ಕರೆಸಿಕೊಂಡು, ನಂತರ ಅಂಬಾಭವಾನಿ ದೇವಸ್ಥಾನದ ಪಕ್ಕದ ನಿರ್ಮಾಣ ಹಂತದ ಕಟ್ಟಡಕ್ಕೆ ತೆರಳಿದ್ದರು.

ಅಲ್ಲಿ ವೇಲ್‌ನಿಂದ ಕುತ್ತಿಗೆ ಬಿಗಿದು ಸಗಾಯ್ ಅವರನ್ನು ಸಾಯಿಸಿದ ಆರೋಪಿಗಳು, ಬಳಿಕ ಶವವನ್ನು ರಸ್ತೆ ಬದಿ ಎಸೆದು ಮನೆಗೆ ತೆರಳಿದ್ದರು. ಮರುದಿನ ಬೆಳಿಗ್ಗೆ ಶವವನ್ನು ನೋಡಿದ ಸ್ಥಳೀಯರು, ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ಮುಟ್ಟಿಸಿದ್ದರು.

ಮುಖದಲ್ಲಿ ದುಃಖ ಕಾಣಲಿಲ್ಲ: ‘ಪತಿ ₹ 2,000 ತೆಗೆದುಕಂಡು ರಾತ್ರಿ ಮನೆಯಿಂದ ಹೊರಗೆ ಹೋಗಿದ್ದರು. ಅವರ ಜೇಬಿನಲ್ಲಿ ಆ ಹಣವಿಲ್ಲ. ದರೋಡೆಕೋರರು ಹಣಕ್ಕಾಗಿ ಅವರನ್ನು ಕೊಂದಿರಬಹುದು’ ಎಂದು ಮಮತಾ ದೂರು ಕೊಟ್ಟಿದ್ದರು.

ಆದರೆ, ಪತಿಯನ್ನು ಕಳೆದುಕೊಂಡ ದುಃಖ ಅವರ ಮುಖದಲ್ಲಿ ಕಾಣಲಿಲ್ಲ. ಕೆಲ ಸಂಬಂಧಿಗಳನ್ನು ವಿಚಾರಿಸಿದಾಗ, ಮಮತಾ–ಅಪ್ಪು ನಡುವಿನ ಸಂಬಂಧದ ಬಗ್ಗೆ ತಿಳಿಯಿತು. ಇಬ್ಬರೂ ಪ್ರತಿದಿನ ಗಂಟೆಗಟ್ಟಲೇ ಸಂಭಾಷಣೆ ನಡೆಸಿರುವುದು ಹಾಗೂ ಸೆ.18ರ ರಾತ್ರಿ ಕೂಡ ಫೋನ್ ಮಾಡಿ ಮಾತನಾಡಿರುವುದು ಸಿಡಿಆರ್‌ನಿಂದ ಗೊತ್ತಾಯಿತು. ಅಲ್ಲದೇ, ರಾತ್ರಿ ಇಬ್ಬರ ಮೊಬೈಲ್‌ಗಳೂ ಒಂದೇ ಟವರ್‌ನಿಂದ ಸಂಪರ್ಕ ಪಡೆದಿದ್ದವು ಎಂದು ಪೊಲೀಸರು ವಿವರಿಸಿದರು.

ಮೊದಲು ಅಪ್ಪುನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ‘‌ಸಗಾಯ್‌ ಅವರ ಕುತ್ತಿಗೆ ಬಿಗಿಯುವಾಗ ಭಯವಾಗಿ ನಾನು ಕಟ್ಟಡದಿಂದ ಹೊರಬಂದೆ. ಆದರೆ, ‘ಇಷ್ಟೆಲ್ಲ ಕಷ್ಟಪಟ್ಟು ಈಗ ಕೊಲ್ಲುವುದು ಬೇಡವೆಂದರೆ ಹೇಗೆ’ ಎನ್ನುತ್ತ ಮಮತಾಳೇ ಕುತ್ತಿಗೆ ಬಿಗಿದಳು’ ಎಂದು ಹೇಳಿಕೆ ಕೊಟ್ಟ. ಅಂತ್ಯಕ್ರಿಯೆ ಮುಗಿದ ಬಳಿಕ ಮಮತಾ ಅವರನ್ನೂ ಬಂಧಿಸಿದೆವು ಎಂದು ಪೊಲೀಸರು ಹೇಳಿದರು.

ಪತ್ನಿಗಾಗಿ ಮನೆ ಕಟ್ಟಿದ್ದರು

‘ಸಗಾಯ್ ಪತ್ನಿಯನ್ನು ತುಂಬ ಪ್ರೀತಿಸುತ್ತಿದ್ದರು. ಮದುವೆಯಾಗಿ ನಾಲ್ಕು ವರ್ಷವಾದರೂ ಮಗು ಆಗಲಿಲ್ಲವೆಂಬ ಕೊರಗು ಅವರಿಗಿತ್ತು. ಇದಕ್ಕಾಗಿ ಪತ್ನಿಗೆ ಚಿಕಿತ್ಸೆಯನ್ನೂ ಕೊಡಿಸುತ್ತಿದ್ದರು.

ವಾಸಕ್ಕೆ ಸ್ವಂತ ಮನೆ ಇಲ್ಲ ಎಂದು ಮಮತಾ ಬೇಸರ ವ್ಯಕ್ತಪಡಿಸಿದ್ದಕ್ಕೆ, ಇತ್ತೀಚೆಗೆ ಪತ್ನಿ ಹೆಸರಿನಲ್ಲೇ ವೀರಸಾಗರ ಗ್ರಾಮದಲ್ಲಿ ಮನೆಯನ್ನೂ ಕಟ್ಟಿಸಿದ್ದರು. ಆದರೆ, ಮಮತಾ ನಡತೆ ಸರಿಯಿಲ್ಲವೆಂದು ಯಾರೋ ಇತ್ತೀಚೆಗೆ ಹೇಳಿದಾಗ ಒಮ್ಮೆಲೆ ಖಿನ್ನತೆಗೆ ಒಳಗಾಗಿದ್ದರು. ಅದೇ ನೋವಿನಲ್ಲಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು’ ಎಂದು ಸಗಾಯ್ ಸಂಬಂಧಿಗಳು ಹೇಳಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.