ADVERTISEMENT

ಸಾಲ ಮರಳಿಸದಿದ್ದಕ್ಕೆ ಬೆಲ್ಟ್‌ನಿಂದ ಕುತ್ತಿಗೆ ಬಿಗಿದು ಮಹಿಳೆಯ ಹತ್ಯೆ

ಮಹಿಳೆ ಕೊಂದು, ಶವ ಪೊದೆಗೆಸೆದರು!

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 18:52 IST
Last Updated 21 ಅಕ್ಟೋಬರ್ 2018, 18:52 IST
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು   

ಬೆಂಗಳೂರು: ಸಾಲ ವಾಪಸ್ ಕೊಡಲಿಲ್ಲವೆಂದು ಬೆಲ್ಟ್‌ನಿಂದ ಕುತ್ತಿಗೆ ಬಿಗಿದು ಮಹಿಳೆಯನ್ನು ಕೊಲೆ ಮಾಡಿದ ಸುಂದರ್ (31) ಹಾಗೂ ನಾಗರಾಜ್ (28) ಎಂಬುವರು ಬಾಣಸವಾಡಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಲಿಂಗರಾಜಪುರ ನಿವಾಸಿ ಶಾಂತಮ್ಮ (52) ಅ.10ರಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಅವರ ಮಗಳು ರಾಧಿಕಾ ಬಾಣಸವಾಡಿ ಠಾಣೆಗೆ ದೂರು ಕೊಟ್ಟಿದ್ದರು. ಶನಿವಾರ ಬೆಳಿಗ್ಗೆ ಹೆಣ್ಣೂರು ಬಂಡೆಯ ಪೊದೆಯಲ್ಲಿ ಶಾಂತಮ್ಮ ಅವರ ಶವ ಕೊಳೆತ ಸ್ಥಿತಿಯಲ್ಲಿ ಪ‍ತ್ತೆಯಾಗಿತ್ತು. ಕೊಲೆ (ಐಪಿಸಿ 302) ಹಾಗೂ ಸಾಕ್ಷ್ಯ ನಾಶಕ್ಕೆ ಯತ್ನ (201) ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಪೊಲೀಸರು, ಸಂಜೆಯೇ ಆರೋಪಿಗಳನ್ನು ಬಂಧಿಸಿದ್ದಾರೆ.

₹ 50 ಸಾವಿರದ ಜಗಳ: ಆಟೊ ಚಾಲಕನಾದ ಸುಂದರ್, ನೆರೆಮನೆಯ ಶಾಂತಮ್ಮ ಅವರಿಗೆ ಆರು ತಿಂಗಳ ಹಿಂದೆ ₹ 50 ಸಾವಿರ ಸಾಲ ಕೊಟ್ಟಿದ್ದ. ಮನೆಗೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಶಾಂತಮ್ಮ ಅವರಿಗೆ ಸಕಾಲಕ್ಕೆ ಹಣ ಮರಳಿಸಲು ಆಗಿರಲಿಲ್ಲ. ಈ ವಿಚಾರವಾಗಿ ಆತ ನಿತ್ಯ ಮನೆ ಹತ್ತಿರ ಹೋಗಿ ಗಲಾಟೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಅ.10ರಂದು ಶಾಂತಮ್ಮ ಮನೆಗೆಲಸ ಮುಗಿಸಿಕೊಂಡು ಹೆಣ್ಣೂರು ಮುಖ್ಯರಸ್ತೆಯಲ್ಲಿ ನಡೆದು ಬರುತ್ತಿದ್ದರು. ಈ ವೇಳೆ ಎದುರಾದ ಸುಂದರ್ ಹಾಗೂ ಆತನ ಸ್ನೇಹಿತ ನಾಗರಾಜ್, ‘ಹಣಕಾಸಿನ ವಿಚಾರವಾಗಿ ಮಾತನಾಡಬೇಕು. ಬಾ’ ಎಂದು ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತಲೆಗೆ ದೊಣ್ಣೆಯಿಂದ ಹೊಡೆದಿದ್ದರು. ಕೆಳಗೆ ಬಿದ್ದಾಗ ಪ್ಯಾಂಟ್ ಬೆಲ್ಟ್‌ನಿಂದ ಕುತ್ತಿಗೆ ಬಿಗಿದು ಕೊಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶಾಂತಮ್ಮ ನಾಪತ್ತೆಯಾದ ಬಗ್ಗೆ ದೂರು ದಾಖಲಾಗುತ್ತಿದ್ದಂತೆಯೇ ನಗರ ತೊರೆದಿದ್ದ ಆರೋಪಿಗಳು, ಕೆಜಿಎಫ್‌ನಲ್ಲಿರುವ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದಿದ್ದರು. ವಾರ ಕಳೆದರೂ ಶವ ಪತ್ತೆಯಾಗದ ಕಾರಣ ಅ.18ರಂದು ನಗರಕ್ಕೆ ವಾಪಸಾಗಿ ಎಂದಿನಂತೆ ಓಡಾಡಿಕೊಂಡಿದ್ದರು.

ಕೊನೆಯ ಕರೆಯಿಂದ ಸುಳಿವು
‘ಮೃತರ ಮೊಬೈಲ್ ಕರೆ ವಿವರ (ಸಿಡಿಆರ್) ಪರಿಶೀಲಿಸಿದಾಗ ಅವರಿಗೆ ಕೊನೆಯ ಕರೆ ಹೋಗಿದ್ದು ಸುಂದರ್‌ನಿಂದಲೇ. ಅ.10ರ ಬೆಳಿಗ್ಗೆ ಹಣ ಕೇಳಲು ಆತ ಕರೆ ಮಾಡಿ ಎರಡು ನಿಮಿಷ ಮಾತನಾಡಿದ್ದ. ಆತನ ಬಗ್ಗೆ ಶಾಂತಮ್ಮ ಅವರ ಮಗಳ ಬಳಿ ವಿಚಾರಿಸಿದಾಗ, ‘ಸುಂದರ್ ಬಳಿ ಅಮ್ಮ ಸಾಲ ಪಡೆದಿದ್ದಳು’ ಎಂದು ಹೇಳಿಕೆ ಕೊಟ್ಟರು. ಆ ನಂತರ ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡ. ಬಳಿಕ ನಾಗರಾಜ್‌ನನ್ನೂ ಪತ್ತೆ ಮಾಡಿದೆವು’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.