ADVERTISEMENT

ಲಾಲ್‌ಬಾಗ್‌: ವಾಹನ ಸಂಚಾರ ನಿಷೇಧ ಮರೀಚಿಕೆ

ನಿರ್ದೇಶಕರ ವರ್ಗಾವಣೆ: ನಿರ್ಣಯ ಅನುಷ್ಠಾನಕ್ಕೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 20:24 IST
Last Updated 6 ಮಾರ್ಚ್ 2019, 20:24 IST
   

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ ಉದ್ಯಾನದಲ್ಲಿ ವಾಹನ ಸಂಚಾರ ನಿರ್ಬಂಧಿಸಲು ತೋಟಗಾರಿಕೆ ಇಲಾಖೆ ಒಂದೂವರೆ ತಿಂಗಳ ಹಿಂದೆ ನಿರ್ಣಯ ಕೈಗೊಂಡಿತ್ತು. ಈ ನಿರ್ಣಯದ ಅನುಷ್ಠಾನ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ತೋಟಗಾರಿಕೆ ಇಲಾಖೆಯ ನಿರ್ದೇಶಕರು ಇತ್ತೀಚೆಗಷ್ಟೇ ವರ್ಗಾವಣೆಯಾಗಿದ್ದರಿಂದ ನಿರ್ಣಯ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ವತಿಯಿಂದ ಲಾಲ್‌ಬಾಗ್‌ನಲ್ಲಿ ನ.26 ರಂದು ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ, ‘ಉದ್ಯಾನದೊಳಗೆ ವಾಹನಗಳ ಪ್ರವೇಶ ಸಂಪೂರ್ಣ ನಿರ್ಬಂಧಿಸಬೇಕು’ ಎಂದು ನಡಿಗೆದಾರರು ಒತ್ತಾಯಿಸಿದ್ದರು.

ADVERTISEMENT

ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ, ‘ನಿರ್ದೇಶಕರೂ ಸೇರಿದಂತೆ
ಯಾವುದೇ ಅಧಿಕಾರಿಗಳ ವಾಹನಗಳು ಲಾಲ್‌ಬಾಗ್‌ ಉದ್ಯಾನದೊಳಗೆ ಪ್ರವೇಶಿಸದಂತೆ ನಿರ್ಬಂಧ ಹೇರಲು’ ಸೂಚಿಸಿದ್ದರು.

‘ಪಾರ್ಕಿಂಗ್‌ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ಒಳಗಿನ ಕಚೇರಿಗಳಿಗೆ ತೆರಳುವುದಕ್ಕೆ ಬ್ಯಾಟರಿಚಾಲಿತ ವಾಹನಗಳ ವ್ಯವಸ್ಥೆ ಮಾಡಲು ಇನ್ನು ಒಂದೂವರೆ ತಿಂಗಳು ಕಾಲಾವಕಾಶ ಬೇಕು. ಬಳಿಕ ನನ್ನ ವಾಹನಕ್ಕೂ ಉದ್ಯಾನದೊಳಗೆ ಪ್ರವೇಶಿಸಲು ಅವಕಾಶ ಇರಲಾರದು’ ಎಂದು ಆಗ ಇಲಾಖೆಯ ನಿರ್ದೇಶಕರಾಗಿದ್ದ ವೈ.ಎಸ್‌.ಪಾಟೀಲ ಹೇಳಿದ್ದರು. ಆದರೆ, ಪಾಟೀಲ ಅವರು ವಿಜಯಪುರ ಜಿಲ್ಲಾಧಿಕಾರಿಯಾಗಿವರ್ಗಾವಣೆಗೊಂಡಿದ್ದರಿಂದ ಈ ನಿರ್ಣಯ ಅನುಷ್ಠಾನಗೊಂಡಿಲ್ಲ.

‘ಸದ್ಯ, ಇಲಾಖೆಯ ಹೊಸ ನಿರ್ದೇಶಕರಾಗಿಡಾ.ಎಂ.ವಿ.ವೆಂಕಟೇಶ್‌ ಅವರು ಅಧಿಕಾರ ಸ್ವೀಕರಿಸಿದ್ದಾರೆ.ಅವರಿಗೆ ಇಲ್ಲಿಯ ವ್ಯವಸ್ಥೆ, ಯೋಜನೆಗಳು ಹಾಗೂನಡಿಗೆದಾರರ ಬೇಡಿಕೆಗಳ ಬಗ್ಗೆ ಗಮನಕ್ಕೆ ತಂದಿದ್ದೇವೆ. ಆದರೆ, ಎಲ್ಲ ವಿಷಯಗಳ ಕುರಿತು ಇನ್ನೂ ಸಂಪೂರ್ಣವಾಗಿ ವಿವರಿಸಿಲ್ಲ’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್‌ ತಿಳಿಸಿದರು.

‘ಕೈಗೆತ್ತಿಕೊಳ್ಳಬೇಕಾದ ಯೋಜನೆಗಳ ಬಗೆಗೆ ಪ್ರತ್ಯೇಕವಾಗಿ ಚರ್ಚಿಸೋಣ’ ಎಂದು ವೆಂಕಟೇಶ್‌ ಅವರು ಹೇಳಿದ್ದಾರೆ. ಇನ್ನು ಎರಡು ಮೂರು ದಿನಗಳಲ್ಲಿಈ ಬಗ್ಗೆ ಅವರೊಂದಿಗೆ ಮಾತನಾಡುತ್ತೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.