ಕರ್ನಾಟಕ ಲಲಿತಕಲಾ ಅಕಾಡೆಮಿಯ ‘ವರ್ಣಶ್ರೀ ಪ್ರಶಸ್ತಿ’ ಹಾಗೂ ‘ಗೌರವ ಪ್ರಶಸ್ತಿ’ ಪುರಸ್ಕೃತರೊಂದಿಗೆ ಗಣ್ಯರು ಪಾಲ್ಗೊಂಡಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಸಾವಿರ ಪದಗಳಲ್ಲಿ ಹೇಳಲಾಗದ್ದನ್ನು ಒಂದು ಚಿತ್ರ ಸರಳವಾಗಿ ಹೇಳುತ್ತದೆ. ಚಿತ್ರ ಕಲೆಗೆ ಯಾವುದೇ ಘಟನೆಯ ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಡುವ ಶಕ್ತಿ ಇದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಸಾಧಕ ಚಿತ್ರಕಲಾವಿದರಿಗೆ ‘ಗೌರವ ಪ್ರಶಸ್ತಿ’ ಮತ್ತು ‘ವರ್ಣಶ್ರೀ ಪ್ರಶಸ್ತಿ’ ಪ್ರದಾನ ಮಾಡಿ ಶುಕ್ರವಾರ ಮಾತನಾಡಿದರು.
‘ನಮ್ಮ ಸರ್ಕಾರ ನಾಡಿನ ಕಲೆ, ಸಂಸ್ಕೃತಿಯನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ 14 ಅಕಾಡೆಮಿಗಳಿಗೂ ತಲಾ ₹1 ಕೋಟಿ ಅನುದಾನ ಒದಗಿಸಲಾಗಿದೆ’ ಎಂದರು.
‘ಹಿಂದಿನ ಸರ್ಕಾರ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ನಿರ್ದೇಶಕರನ್ನು ನೇಮಿಸಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣದಲ್ಲೇ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷ, ನಿರ್ದೇಶಕರನ್ನು ನೇಮಿಸಿದ್ದೇವೆ. ಎಲ್ಲ ಅಕಾಡೆಮಿಗಳ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ’ ಎಂದು ತಿಳಿಸಿದರು.
‘ಅಕ್ಷರ ಲಿಪಿ ಹುಟ್ಟುವುದಕ್ಕೂ ಮುನ್ನವೇ ಚಿತ್ರಲಿಪಿ ಹುಟ್ಟಿತ್ತು. ಚಿತ್ರಕಲೆಗೆ ಇರುವ ಶಕ್ತಿ ಅಗಾಧವಾದುದು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಬಣ್ಣಿಸಿದರು.
‘ಬಣ್ಣಕ್ಕೆ ಅದರದ್ದೇ ಆದ ಭಾವ ಇರುತ್ತದೆ. ಸಾಹಿತ್ಯಕ್ಕೂ ಮತ್ತು ಚಿತ್ರಕಲೆಗೂ ಸಂಬಂಧವಿದೆ. ಚಿತ್ರಗಳ ಮೂಲಕವೇ ಕಥೆಯನ್ನು ಹೇಳಲಾಗುತ್ತದೆ. ಪಠ್ಯ ಪುಸ್ತಕದಲ್ಲಿ ಚಿತ್ರಕಲೆಯ ಮಹತ್ವ ಹೆಚ್ಚಿದೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲಲಿತಾಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎಂ.ವಿ. ವೆಂಕಟೇಶ್, ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ
ಗೌರವ ಪ್ರಶಸ್ತಿ: ಬಿ.ಪಿ.ಕಾರ್ತಿಕ್ ಕಮಲ್ ಅಹ್ಮದ್ ಎಂ. ಸಿ.ಎಸ್.ನಿರ್ಮಲಾ ಕುಮಾರಿ ಅವರಿಗೆ 2022-23ನೇ ಸಾಲಿನ ‘ಗೌರವ ಪ್ರಶಸ್ತಿ’ ಹಾಗೂ ನಿಜಲಿಂಗಪ್ಪ ಬ.ಹಾಲ್ವಿ ಡಾ.ವಿಠಲರಡ್ಡಿ ಫ.ಚುಳಕಿ ಹಾಗೂ ಎಚ್. ಬಾಬುರಾವ್ ಅವರಿಗೆ 2023-24ನೇ ಸಾಲಿನ ‘ಗೌರವ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ವರ್ಣ ಪ್ರಶಸ್ತಿ: ವೀಣಾ ಶ್ರೀನಿವಾಸ್ ಪರಮೇಶ್ ಡಿ.ಜೋಳದ ಪಿ.ಎ.ಬಿ.ಈಶ್ವರ್ ಕೂಡಲಯ್ಯ ಹಿರೇಮಠ ಅಶೋಕ್ ಕಲಶೆಟ್ಟಿ ನಂದಬಸಪ್ಪ ವಾಡೆ ಕೆ.ಜಿ.ಲಿಂಗದೇವರು ಬಿ.ಎಲ್.ಮಹೇಶ್ ಶಕುಂತಲಾ ವರ್ಣೇಕರ್ ಮಂಜುನಾಥ ಗೋವಿಂದವಾಡ ಅವರಿಗೆ 2021-22ನೇ ಸಾಲಿನ ಪ್ರಶಸ್ತಿ ಹಾಗೂ ಪ್ರಕಾಶ್ ಜಿ.ನಾಯಕ್ ಬಸವರಾಜ ಸಿ.ಕುತ್ನಿ ಜಗದೀಶ್ ಎಂ.ಕಾಂಬಳೆ ಟಿ.ಎಸ್.ಜಯದೇವಣ್ಣ ಶ್ರೀಶೈಲ ಎಸ್.ಧೋತ್ರೆ ಎ.ಮಹದೇವಸ್ವಾಮಿ ಮೀನಾಕ್ಷಿ ಸದಲಗಿ ಕೆ.ಎಂ.ರವೀಶ್ ಎಫ್.ವಿ.ಚಿಕ್ಕಮಠ ಸೈಯದ್ ಆಸೀಫ್ ಅಲಿ ಅವರಿಗೆ 2022-23ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.