ADVERTISEMENT

ದಾಬಸ್ ಪೇಟೆ: ಮಹಿಳೆ ಮೇಲೆ ಚಿರತೆ ದಾಳಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2023, 21:24 IST
Last Updated 30 ನವೆಂಬರ್ 2023, 21:24 IST
ಚಿರತೆ ದಾಳಿಯಿಂದ ಗಾಯಗೊಂಡ ಮಹಿಳೆಯನ್ನು ಸಂತೈಸುತ್ತಿರುವ ಗ್ರಾಮಸ್ಥರು
ಚಿರತೆ ದಾಳಿಯಿಂದ ಗಾಯಗೊಂಡ ಮಹಿಳೆಯನ್ನು ಸಂತೈಸುತ್ತಿರುವ ಗ್ರಾಮಸ್ಥರು   

ದಾಬಸ್ ಪೇಟೆ: ಶಿವಗಂಗೆ ಬೆಟ್ಟದ ತಪ್ಪಲಿನ ಕಂಬಾಳು ಗೊಲ್ಲರಹಟ್ಟಿಯಲ್ಲಿ ಬುಧವಾರ ಮಹಿಳೆಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿದ್ದು, ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಮ್ಮಯ್ಯ (55) ಚಿರತೆ ದಾಳಿಗೆ ಒಳಗಾದವರು. ಗಾಯಗೊಂಡಿದ್ದ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಈ ಘಟನೆಯಿಂದ ಹೋಬಳಿಯ ಜನ ಭಯಭೀತರಾಗಿದ್ದಾರೆ.

’ಸಮೀಪದ ತೊರೆಹಳ್ಳದ ಪಕ್ಕದಲ್ಲಿ ಎಂದಿನಂತೆ ಹಸು, ಮೇಕೆಗಳನ್ನು ಮೇಯಿಸುತಿದ್ದೆ. ಏಕಾಏಕಿ ಚಿರತೆ ಮೇಕೆಗಳ ಮೇಲೆ ದಾಳಿ ನಡೆಸಿತು. ಮೇಕೆಗಳು ತಪ್ಪಿಸಿಕೊಂಡು ಓಡಿ ಹೋದವು. ಆಗ ಚಿರತೆ ನನ್ನ ಮೇಲೆ ದಾಳಿ ಮಾಡಿತು. ಗಾಬರಿಗೊಂಡು ಜೋರಾಗಿ ಕೂಗಿದೆ. ಅಕ್ಕಪಕ್ಕದ ಜಮೀನುಗಳಲ್ಲಿದ್ದ ರೈತರು ಕೂಗುತ್ತಾ ಓಡಿ ಬಂದರು. ಚಿರತೆ ಓಡಿಹೋಯಿತು. ಜನ ಬರುವುದು ತಡವಾಗಿದ್ದರೆ ನನ್ನ ಪ್ರಾಣ ಉಳಿಯುತ್ತಿರಲಿಲ್ಲ’ ಎಂದು ಚಿರತೆ ದಾಳಿಯ ಬಗ್ಗೆ ಅಮ್ಮಯ್ಯ ವಿವರಿಸಿದರು.

ADVERTISEMENT

ನೆಲಮಂಗಲ ತಾಲ್ಲೂಕಿನ, ಸೋಂಪುರ ಹೋಬಳಿಯಲ್ಲಿ ಚಿರತೆ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಚಿರತೆ ಓಡಾಡುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸರಿಯಾಗಿವೆ. ಈ ಬಗ್ಗೆ ಹಲವು ಬಾರಿ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

ಚಿರತೆ ಸೆರೆ ಹಿಡಿಯಲು ಬೋನು ಇಟ್ಟ ಅರಣ್ಯ ಇಲಾಖೆ 
ಕಾಡಂಚಲ್ಲಿ ಮಹಿಳೆಯ ಮನೆ ಇದ್ದು ಚಿರತೆ ದಾಳಿ ಮಾಡಿದ ಸ್ಥಳವನ್ನು ಪರಿಶೀಲಿಸಿದ್ದೇವೆ. ಮಹಿಳೆಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇವೆ. ಚಿರತೆ ಉಗುರಿನಿಂದ ಗಾಯವಾಗಿದ್ದು ಚಿರತೆ ಸೆರೆ ಹಿಡಿಯಲು ಬೋನು ಇಟ್ಟಿದ್ದೇವೆ.
–ಎಸ್. ಶ್ರೀಧರ್ ತಾಲ್ಲೂಕು ವಲಯ ಅರಣ್ಯ ಅಧಿಕಾರಿ ನೆಲಮಂಗಲ
ಚಿರತೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗಾಯಗೊಂಡ ಮಹಿಳೆಗೆ ಸೂಕ್ತ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದು.
–ಎನ್. ಶ್ರೀನಿವಾಸ್ ಶಾಸಕರು ನೆಲಮಂಗಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.