ದಾಬಸ್ ಪೇಟೆ: ನರಸೀಪುರ ಪಂಚಾಯಿತಿ ವ್ಯಾಪ್ತಿಯ ಕೆರೆಪಾಳ್ಯ ಹತ್ತಿರ ಬಂಡೆ ಮೇಲೆ ಎರಡು ದಿನ ಕಾಣಿಸಿಕೊಂಡು ಆತಂಕ ಮೂಡಿಸಿದ್ದ 7 ವರ್ಷದ ಹೆಣ್ಣು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಶನಿವಾರ ಬಿದ್ದಿದೆ.
ಚಿರತೆ ಸೆರೆ ಸಿಕ್ಕ ನಂತರ ಗ್ರಾಮಸ್ಥರು ಸಮಾಧಾನಗೊಂಡಿದ್ದು, ಇನ್ನೂ ಒಂದೆರಡು ಚಿರತೆಗಳು ಇರಬಹುದು ಅನ್ನುವ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ನ.27ರ ಸಂಜೆ 4.30ರ ಸಮಯದಲ್ಲಿ ಬಂಡೆಯ ಮೇಲೆ ಚಿರತೆ ಕಾಣಿಸಿಕೊಂಡಿತ್ತು. ಬೋನನಿಟ್ಟ ಎರಡು ದಿನದ ನಂತರ ಚಿರತೆ ಬೋನಿಗೆ ಬಿದ್ದಿದೆ. ‘ಚಿರತೆ ಸೆರೆಗೆ ಸಿಲುಕಿಸಲು ಬೋನಿನಲ್ಲಿ ನಾಯಿ ಕಟ್ಟಿದ್ದೆವು. ನಾಯಿ ತಿನ್ನಲು ಬಂದು ಚಿರತೆ ಬೋನಿಗೆ ಬಿದ್ದಿದೆ. ಇದನ್ನು ಕಾವೇರಿ ವನ್ಯಜೀವಿ ಅಭಯಾರಣ್ಯಕ್ಕೆ ರವಾನೆ ಮಾಡಲಾಗಿದೆ’ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.
‘ಜನರು ಹೇಳುವಂತೆ ಹೆಗ್ಗುಂದ ಬೆಟ್ಟದ ತಪ್ಪಲಿನಲ್ಲಿ ಎರಡು ಮೂರು ಚಿರತೆ ಇವೆ. ಈಗ ಒಂದು ಬೋನಿಗೆ ಬಿದ್ದಿದೆ. ಅರಣ್ಯ ಇಲಾಖೆ ಇನ್ನೊಂದು ಬಾರಿ ಬೋನಿಟ್ಟು ಉಳಿದವನ್ನು ಹಿಡಿದು ಜನ ನೆಮ್ಮದಿಯಿಂದ ಓಡಾಡುವಂತೆ ಮಾಡಬೇಕು’ ಎಂದು ಸ್ಥಳೀಯರಾದ ಬಿ.ಕೆ. ರಮೇಶ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.