ADVERTISEMENT

ಬೇಗೂರಿನಲ್ಲಿ ಚಿರತೆ; ಜನರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 19:19 IST
Last Updated 27 ಜನವರಿ 2021, 19:19 IST
ಚಿರತೆ ಸೆರೆಗಾಗಿ ಅಪಾರ್ಟ್‌ಮೆಂಟ್‌ನ ಹಿಂಭಾಗದಲ್ಲಿ ಇಡಲಾದ ಬೋನು
ಚಿರತೆ ಸೆರೆಗಾಗಿ ಅಪಾರ್ಟ್‌ಮೆಂಟ್‌ನ ಹಿಂಭಾಗದಲ್ಲಿ ಇಡಲಾದ ಬೋನು   

ಬೊಮ್ಮನಹಳ್ಳಿ: ಬೇಗೂರಿನ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದರಿಂದ ಜನರು ಭಯಭೀತರಾಗಿದ್ದಾರೆ. ಚಿರತೆಯ ಭಯದಿಂದಾಗಿ ನಿವಾಸಿಗಳು ಮನೆಯಿಂದ ಹೊರಬರಲಾಗದೇ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ.

ಚಿರತೆ ಅಪಾರ್ಟ್‌ಮೆಂಟ್‌ ಸಮುಚ್ಚಯದ ಪಾರ್ಕಿಂಗ್ ಜಾಗದಲ್ಲಿ ಅಡಗಿ ಕುಳಿತಿದೆ ಎಂದು ಮೂರ್ನಾಲ್ಕು ದಿನಗಳಿಂದಲೂ ಚರ್ಚೆಗಳು ನಡೆಯುತ್ತಿದ್ದವು. ರಾತ್ರಿ ವೇಳೆ ಹಾಗೂ ನಸುಕಿನಲ್ಲಿ ಚಿರತೆ ಓಡಾಡಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಚಿರತೆ ಇರುವುದು ಖಚಿತಗೊಂಡಿದ್ದರಿಂದ ಅದರ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಪಾರ್ಟ್‌ಮೆಂಟ್‌ನ ನೆಲಮಾಳಿಗೆ ಹಾಗೂ ಹೊರಭಾಗದಲ್ಲಿ ಎರಡು ಬೋನುಗಳನ್ನು ಇಡಲಾಗಿದೆ. ಒಂದು ಬೋನಿನಲ್ಲಿ ಕುರಿಯನ್ನು ಇಟ್ಟು ಬೋನಿಗೆ ಬೀಳಿಸುವ ತಂತ್ರ ಬಳಸಲಾಗಿದೆ.

ADVERTISEMENT

ಅಪಾರ್ಟ್‌ಮೆಂಟ್ ಸಮುಚ್ಚಯದ ಹಿಂಭಾಗದಲ್ಲಿ 150 ಎಕರೆಯ ಪಾಳುಬಿದ್ದ ಜಾಗವಿದ್ದು, ಕಲ್ಲು ಕ್ವಾರಿ, ಮೂರು ಸಣ್ಣ ಕೆರೆ, ಗಿಡಗಂಟೆ, ಪೊದೆ ಬೆಳೆದುಕೊಂಡಿದ್ದು ಅಲ್ಲಿಂದಲೇ ಚಿರತೆ ಬಂದು ಹೋಗುತ್ತಿದೆ ಎಂದು ಶಂಕಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ ಶಿವರಾತ್ರೇಶ್ವರ ಸ್ವಾಮಿ, ‘ಚಿರತೆ ಇಲ್ಲಿ ಬಂದು ಹೋಗುತ್ತಿದೆ ಎಂಬುದು ದೃಢಪಟ್ಟಿದೆ. ಅಪಾರ್ಟ್‌ಮೆಂಟ್‌ನ ಕಾಂಪೌಂಡ್ ಮೇಲೆ ಅದರ ಹೆಜ್ಜೆ ಗುರುತುಗಳಿವೆ. ಏಳು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದೇವೆ. ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ‘ ಎಂದು ಹೇಳಿದರು.

ಚಿರತೆ ರಾತ್ರಿ ವೇಳೆ ಮಾತ್ರವೇ ಅಪಾರ್ಟ್‌ಮೆಂಟ್‌ನಲ್ಲಿ ಕಾಣಿಸಿಕೊಳ್ಳುತ್ತಿದೆ. ನಿಯಮಾವಳಿಯಂತೆ ರಾತ್ರಿ ವೇಳೆ ಕಾಡು ಪ್ರಾಣಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಮಾಡುವಂತಿಲ್ಲ. ಹೀಗಾಗಿ ಚಿರತೆ ಸೆರೆ ಹಿಡಿಯಲು ಕಷ್ಟವಾಗುತ್ತಿದೆ ಎಂದರು.

‘ಕಾಡು ನಾಶದ ಪರಿಣಾಮವಿದು. ಭೂ ಮಾಫಿಯಾದಿಂದಾಗಿ ಬನ್ನೇರುಘಟ್ಟ ಅರಣ್ಯ ನಾಶವಾಗುತ್ತಿದೆ, ರೆಸಾರ್ಟ್, ವಿಲ್ಲಾಗಳು ತಲೆ ಎತ್ತಿದ್ದು, ಕಾಡು ಪ್ರಾಣಿಗಳು ಭೀತಿಯಿಂದ ಊರೊಳಗೆ ಬರುತ್ತಿವೆ. ಸರ್ಕಾರ, ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ’ ಎನ್ನುತ್ತಾರೆ ಬೇಗೂರಿನ ನಿವಾಸಿ ಪೇಟೆ ನಾಗರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.