ADVERTISEMENT

ನಾಲ್ವರಿಗೆ ಜೀವಾವಧಿ ಶಿಕ್ಷೆ

ಸೋದರಿಯ ರಕ್ಷಣೆಗೆ ತೆರಳಿದ್ದ ಅಣ್ಣನನ್ನು ಕೊಂದಿದ್ದರು

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 19:05 IST
Last Updated 19 ಜನವರಿ 2019, 19:05 IST

ಬೆಂಗಳೂರು: ಸೋದರಿಯ ರಕ್ಷಣೆಗೆ ತೆರಳಿದ್ದ ಸುಂದರ್ (42) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ 70ನೇ ಸಿಸಿಎಚ್ ನ್ಯಾಯಾಲಯ ಶನಿವಾರ ಆದೇಶ ಹೊರಡಿಸಿದೆ.

ಹಳೇ ಮಡಿವಾಳದ ಶಕೀಲ್ ಅಲಿಯಾಸ್ ಡಿಂಗ್ರಿ (24), ಜಫ್ರುಲ್ಲಾಖಾನ್ ಅಲಿಯಾಸ್ ಲಾಲು (32), ಕುಮಾರ ಅಲಿಯಾಸ್ ಬುಜ್ಜಿ (21) ಹಾಗೂ ಕನಕಪುರ ‌ತಾಲ್ಲೂಕು ತಟ್ಟೆಕೆರೆಯ ನಾಗರಾಜ ಅಲಿಯಾಸ್ ಖಾರದಪುಡಿ ನಾಗ (31) ಶಿಕ್ಷೆಗೆ ಗುರಿಯಾದವರು. ಇನ್ನೊಬ್ಬ ಅಪರಾಧಿ ಮಡಿವಾಳದ ಸಿದ್ಧಾರ್ಥ ಕಾಲೊನಿಯ ಶಶಿಕುಮಾರ್ ಉರುಫ್ ಶಶಿ (23), ಈಗಾಗಲೇ ಮೃತಪಟ್ಟಿದ್ದಾನೆ.

ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ನಡೆಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಂ.ನರೇಂದ್ರ ವಾದಿಸಿದ್ದರು.

ADVERTISEMENT

ಡಾನ್ಸ್‌ ವಿಚಾರಕ್ಕೆ ಜಗಳ: ಸುಂದರ್ ಅವರು ಸೋದರಿ ಸೆಲ್ವಿ ಜತೆ ಸಿದ್ಧಾರ್ಥ ಕಾಲೊನಿಯಲ್ಲಿ ನೆಲೆಸಿದ್ದರು. 2013ರ ನ.13ರಂದು ಡಾ.ಅಂಬೇಡ್ಕರ್ ಸಂಘದ ಕಚೇರಿ ಬಳಿ ಬೀದಿ ನಾಟಕ ಆಯೋಜಿಸಲಾಗಿತ್ತು. ಈ ವೇಳೆ ಅಲ್ಲಿಗೆ ಬಂದಿದ್ದ ಆರೋಪಿಗಳು, ‘ಹಾಡು ಹಾಕಿ. ನಾವು ಡಾನ್ಸ್ ಮಾಡಬೇಕು’ ಎಂದು ಕಲಾವಿದರಿಗೆ ಕಿರಿಕಿರಿ ಉಂಟು ಮಾಡಿದ್ದರು. ಸಂಘದ ಉಸ್ತುವಾರಿ ವಹಿಸಿಕೊಂಡಿದ್ದ ಸೆಲ್ವಿ ಮಧ್ಯಪ್ರವೇಶಿಸಿ ಆರೋಪಿಗಳಿಗೆ ಬೈದಿದ್ದರು. ಅವರ ರಂಪಾಟ ಹೆಚ್ಚಾದಾಗ, ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸಂಘದ ಕಚೇರಿಗೆ ಬೀಗ ಹಾಕಿದ್ದರು.

ಇದರಿಂದ ಕೆರಳಿದ ಆರೋಪಿಗಳು, ಸೆಲ್ವಿ ಅವರನ್ನು ಸುತ್ತುವರಿದು ಗಲಾಟೆ ಮಾಡುತ್ತಿದ್ದರು. ಆಗ ಅಲ್ಲಿಗೆ ಬಂದ ಸುಂದರ್ ಸೋದರಿಯ ರಕ್ಷಣೆಗೆ ಧಾವಿಸಿದ್ದರು. ವಾಗ್ವಾದ ಜೋರಾಗಿ ಆರೋಪಿಗಳು ಸುಂದರ್‌ ಅವರಿಗೆ ಚಾಕುವಿನಿಂದ ಇರಿದು ಕೊಂದಿದ್ದರು.

ಈ ಸಂಬಂಧ ಮೃತರ ಮಗ ಪ್ರತಾಪ್ ದೂರು ಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.