ADVERTISEMENT

ಲಿಂಗಾಯತರಾದರೆ ಸಾಲದು, ಬಸವತತ್ವ ಅನುಸರಿಸಬೇಕು: ಮುರುಘಾ ಶರಣರು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 5:37 IST
Last Updated 27 ಫೆಬ್ರುವರಿ 2020, 5:37 IST
ಶಿವಮೂರ್ತಿ ಮುರುಘಾ ಶರಣರಿಗೆ ಬಿ.ವೈ. ವಿಜಯೇಂದ್ರ ಯಡಿಯೂರಪ್ಪ ಅವರು ಪುಷ್ಪಾರ್ಚನೆ ಮಾಡಿದರು –ಪ್ರಜಾವಾಣಿ ಚಿತ್ರ
ಶಿವಮೂರ್ತಿ ಮುರುಘಾ ಶರಣರಿಗೆ ಬಿ.ವೈ. ವಿಜಯೇಂದ್ರ ಯಡಿಯೂರಪ್ಪ ಅವರು ಪುಷ್ಪಾರ್ಚನೆ ಮಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬಾಯಿ ಮಾತಿನಲ್ಲಿ ಲಿಂಗಾಯತರಾದರೆ ಸಾಲದು, ಬಸವತತ್ವವನ್ನು ತಮ್ಮೊಟ್ಟಿಗೆ ಕಟ್ಟಿಕೊಂಡು ಬಸವಾಯತರಾಗಬೇಕು’ ಎಂದು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಅಸಂಖ್ಯ ಪ್ರಮಥರ ಗಣಮೇಳ ಮತ್ತು ಶಿವಯೋಗ ಸಂಭ್ರಮ ಯಶಸ್ವಿಯಾದ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

‘ಲಿಂಗಾಯತರಾಗುವುದು ಸುಲಭ. ಬಸವಾಯತ ಆಗುವುದು ಸವಾಲಿನ ಕೆಲಸ. ಕೊರಳಲ್ಲಿ ಲಿಂಗ ಕಟ್ಟಿಕೊಂಡು ಬಸವಣ್ಣನನ್ನು ಹಲವರು ಮರೆತಿರುತ್ತಾರೆ. ಲಿಂಗ ಕಟ್ಟಿಕೊಂಡರೂ ಅದರ ಉದ್ದೇಶ ಸಾರ್ಥಕ ಆಗದು. ಲಿಂಗದೊಂದಿಗೆ ಬಸವಣ್ಣನವರನ್ನೂ ಕಟ್ಟಿಕೊಳ್ಳುವ ಕೆಲಸ ಆಗಬೇಕು’ ಎಂದರು.

ADVERTISEMENT

‘ಎಲ್ಲ ಧಾರ್ಮಿಕ ಗುರುಗಳು ಸೇರಿಕೊಂಡು, ಒಬ್ಬ ಗುರುವನ್ನು ಯಾಕೆ ಆಯ್ಕೆ ಮಾಡಿಕೊಳ್ಳಬಾರದು ಎಂದು ಹಲವರು ಪ್ರಶ್ನಿಸುತ್ತಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೂಡ ಇದೇ ಪ್ರಶ್ನೆಯನ್ನು
ಚಿತ್ರದುರ್ಗದಲ್ಲಿ ನನಗೆ ಕೇಳಿದ್ದರು. ಆಗ ನಾನು ಬಸವಣ್ಣನೇ ನಮ್ಮೆಲ್ಲರ ನಾಯಕ ಎಂದು ಸಂತೋಷದಿಂದ
ಪ್ರತಿಕ್ರಿಯಿಸಿದೆ. ಬಸವಣ್ಣನೇ ನಮ್ಮ ನಾಯಕ ಎಂದು ಎಲ್ಲ ಗುರುಗಳೂ ಒಪ್ಪಿಕೊಂಡರೆ, ಗುರು-ಜಗದ್ಗು
ರುಗಳಲ್ಲಿ ಗುದ್ದಾಟವೇ ಇರುವುದಿಲ್ಲ’ ಎಂದರು.

ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಯಡಿಯೂರಪ್ಪ,
‘ಪ್ರಮಥರ ಗಣಮೇಳದ ವೇದಿಕೆಯಲ್ಲಿ ವಿವಿಧ ಧಾರ್ಮಿಕ ಮುಖಂಡರನ್ನು ಒಗ್ಗೂಡಿಸುವ ಮೂಲಕ ಮುರುಘಾ ಶರಣರು ನಮ್ಮ ಸಮಾಜಕ್ಕೆ ಉತ್ತಮ ಸಂದೇಶವನ್ನು ಅವರು ರವಾನಿಸಿದ್ದಾರೆ. ನಾವೆಲ್ಲರೂ ಒಂದು ಕುಟುಂಬದಲ್ಲಿ ಇರುವಾಗ ಭಿನ್ನಾಭಿಪ್ರಾಯಗಳು ಇರುವುದು ಸರ್ವೇ ಸಮಾನ್ಯ. ಅವೆಲ್ಲವನ್ನೂ ತೊಡೆದು ಹಾಕುವ ಪ್ರಯತ್ನ ಗಣಮೇಳ ಮಾಡಿದೆ’ ಎಂದು ಅವರು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.